ಉಮಾಮಹೇಶ್ವರ ದೇವಾಲಯದಲ್ಲಿ ಚಂಡಿಕಾ ಹೋಮ

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.
ಉಮಾಮಹೇಶ್ವರ ದೇವಾಲಯದಲ್ಲಿ ಚಂಡಿಕಾ ಹೋಮ
Published on: 

ಕುಶಾಲನಗರ

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾ-ಭಕ್ತಿಯಿಂದ ಈಚೆಗೆ ನೆರವೇರಿತು.

ದೇವಾಲಯದ ಆವರಣದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಪ್ರಥಮವಾಗಿ ಗಣಪತಿ ಹೋಮ, ನಂತರ ಶ್ರೀ ಮೃತ್ಯುಂಜಯ ಹೋಮ ಹಾಗೂ ಮಹಾ ಚಂಡಿಕಾ ಹೋಮಗಳನ್ನು ಅತ್ಯಂತ ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು. ಇದರೊಂದಿಗೆ ದೇವಾಲಯದ ಆವರಣದಲ್ಲಿರುವ ವಿವಿಧ ದೇವತೆಗಳಿಗೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಮಧ್ಯಾಹ್ನ ದೇವರಿಗೆ ಮಹಾ ಮಂಗಳಾರತಿ ಬೆಳಗಿ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ತದನಂತರ ಆಗಮಿಸಿದ್ದ ನೂರಾರು ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ಸೇವೆಯನ್ನು ಏರ್ಪಡಿಸಲಾಗಿತ್ತು. ಈ ಎಲ್ಲಾ ಪೂಜಾ ವಿಧಿವಿಧಾನಗಳನ್ನು ಕೇರಳದ ಅರ್ಚಕರಾದ ಸಜಿ ಪಣಿಕರ್ ಹಾಗೂ ಸುಕುಮಾರ್ ತಂಡದವರು ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಟಿ.ಎಂ. ಚಾಮಿ, ಉಪಾಧ್ಯಕ್ಷ ಮುತ್ತಪ್ಪ, ಕಾರ್ಯದರ್ಶಿ ಸುರೇಶ್, ಖಜಾಂಚಿ ಅನಂತಕುಮಾರ್, ಸಹ ಕಾರ್ಯದರ್ಶಿ ಹೆಚ್.ಸಿ. ಮೋಹನ್ ಕುಮಾರ್, ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಸಮಿತಿಯ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

ಕೂಡಿಗೆ, ಕೂಡುಮಂಗಳೂರು ಮತ್ತು ಹಾರಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೂರಾರು ಭಕ್ತಾದಿಗಳು ಆಗಮಿಸಿ, ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net