

ಮಡಿಕೇರಿ
ಅರ್ಥಶಾಸ್ತ್ರದ ಅರಿವು ಮತ್ತು ಸಾರ್ವಜನಿಕ ಚರ್ಚೆಗಳು ಶಕ್ತಿಯುತ ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಆಳವಾದ ಅಧ್ಯಯನ, ತಾರ್ಕಿಕ ಚಿಂತನೆ ಹಾಗೂ ಪ್ರಾಮಾಣಿಕ ಆಲೋಚನೆಗಳು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಪ್ರೇರಣೆ ನೀಡುವ ಶಕ್ತಿ ಹೊಂದಿವೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಹಾಗೂ ಪರೀಕ್ಷಾಂಗ ಪ್ರೊ. ಎಂ. ಸುರೇಶ್ ಹೇಳಿದರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಖ್ಯಾತ ಅರ್ಥಶಾಸ್ತ್ರಜ್ಞ ಎ.ಡಿ. ಶ್ರಾಫ್ ಅವರ 60ನೇ ಸ್ಮರಣಾರ್ಥ ಅರ್ಥಶಾಸ್ತ್ರ ವಿಷಯದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಭಾಷಣವೆಂದರೆ ಕೇವಲ ಶಬ್ದಗಳ ಉಚ್ಚಾರಣೆ ಅಥವಾ ಧ್ವನಿಯ ಏರಿಳಿತವಲ್ಲ. ವಿಚಾರಗಳನ್ನು ಧೈರ್ಯವಾಗಿ ಹಾಗೂ ಸ್ಪಷ್ಟವಾಗಿ ವ್ಯಕ್ತಪಡಿಸುವ ಕಲೆಯಾಗಿದೆ. ಮಾತು, ಆಲೋಚನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ಶಕ್ತಿಯನ್ನು ಸಂಭ್ರಮಿಸುವುದು ಎ.ಡಿ. ಶ್ರಾಫ್ ಅವರ ಆಶಯವಾಗಿತ್ತು ಎಂದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ. ಇ. ತಿಪ್ಪೇಸ್ವಾಮಿ, ಭಾರತದ ಆರ್ಥಿಕ, ಕೈಗಾರಿಕಾ ಹಾಗೂ ವಾಣಿಜ್ಯ ನೀತಿಗಳಿಗೆ ಎ.ಡಿ. ಶ್ರಾಫ್ ನೀಡಿದ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ದೇಶದಾದ್ಯಂತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಲ್ಲಿ ಅರ್ಥಶಾಸ್ತ್ರದ ಜ್ಞಾನ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಹಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕಿ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಆತ್ಮಸ್ಥೈರ್ಯ, ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿಗೆ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ. ರಾಘವ ಮಾತನಾಡಿ, ಅರ್ಥಶಾಸ್ತ್ರದ ಕೇಂದ್ರಬಿAದು ಮಾನವನಾಗಿದ್ದು, ಮಾನವ ಕಲ್ಯಾಣ, ಸಾಮಾಜಿಕ ನ್ಯಾಯ ಹಾಗೂ ಸುಸ್ಥಿರ ಅಭಿವೃದ್ಧಿಯ ಕುರಿತು ಆಳವಾದ ಜ್ಞಾನವನ್ನು ನೀಡುವ ವಿಷಯವಾಗಿದೆ. ಇಂತಹ ಕಾರ್ಯಕ್ರಮಗಳು ನೈತಿಕತೆ ಹೊಂದಿದ ನಾಗರಿಕರು ಹಾಗೂ ಹೊಣೆಗಾರಿಕೆಯ ಯುವ ನಾಯಕರನ್ನು ರೂಪಿಸಲು ಸಹಕಾರಿ ಎಂದರು.
ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಬಿ.ಹೆಚ್. ತಳವಾರ್, ಹೆಚ್.ಆರ್. ರಮೇಶ್, ಹರ್ಷಿತ ಶೆಟ್ಟಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಎಚ್.ಕೆ. ರೇಣುಶ್ರೀ, ಸ್ವಪ್ನ ಎಂ. ಶೇಟ್, ಎಸ್. ಮೇಘ, ಎಸ್. ಹೇಮಾವತಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಾಷಣ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ಐ.ಪಿ. ಬಿಂದ್ಯಾ ಪ್ರಥಮ, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎಂ.ಜಿ. ಬೆಳ್ಳಿಯಪ್ಪ ದ್ವಿತೀಯ, ಇದೇ ಕಾಲೇಜಿನ ಕೆ.ಎಸ್. ಸಫಾನ ತೃತೀಯ ಹಾಗೂ ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜಿನ ಎಸ್. ಹೇಮಾವತಿ ಮತ್ತು ಪಿ.ಎ. ನಫ್ಸೀಮಾ ಸಮಧಾನಕರ ಬಹುಮಾನ ಪಡೆದುಕೊಂಡರು.