ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದವರನ್ನು ಸಮಾಜ ಗುರುತಿಸಬೇಕು

ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದವರನ್ನು ಸಮಾಜ ಗುರುತಿಸಬೇಕು
ಶಿರಂಗಾಲ ಗ್ರಾಮದಲ್ಲಿ ನಡೆದ ಸಮಾಜ ಸೇವಕ ದಿ. ಎಸ್.ವಿ. ನಂಜುAಡಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ವಿರಾಜಪೇಟೆ ಅರಮೇರಿ-ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಶ್ರೀ ಮಲ್ಲೇಶ ಸ್ವಾಮೀಜಿ, ಕಲ್ಲಳ್ಳಿ ಶ್ರೀ ರುದ್ರಮುನಿ ಸ್ವಾಮೀಜಿ ಇದ್ದರು.
Published on: 

ಕುಶಾಲನಗರ

ಸಮಾಜದಲ್ಲಿ ನಿಸ್ವಾರ್ಥ ಮನೋಭಾವದಿಂದ ಕೈಗೊಳ್ಳುವ ಸಾಮಾಜಿಕ ಸೇವಾ ಕಾರ್ಯಗಳು ಹಾಗೂ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುವ ವ್ಯಕ್ತಿಗಳನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ವಿರಾಜಪೇಟೆ ಅರಮೇರಿ-ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕುಶಾಲನಗರ ತಾಲೂಕು ಶಿರಂಗಾಲ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ, ಸಮಾಜ ಸೇವಕರೂ ಆದ ದಿ. ಎಸ್.ವಿ. ನಂಜುAಡಪ್ಪ ಅವರ ಶ್ರದ್ಧಾಂಜಲಿ ಸಭೆ ಹಾಗೂ 'ನುಡಿನಮನ' ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಎಸ್.ವಿ. ನಂಜುAಡಪ್ಪ ತಮ್ಮ ಜನಪರ ಹಾಗೂ ಸೇವಾ ಕಾರ್ಯಗಳಿಂದ ಗ್ರಾಮ ಪಂಚಾಯಿತಿಯ ಮಾದರಿ ಅಧ್ಯಕ್ಷರಾಗಿ ಹೊರಹೊಮ್ಮಿದ್ದರು. 1970ರ ದಶಕದಲ್ಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಿರಂಗಾಲ ಗ್ರಾಮವನ್ನು ಒಂದು ಆದರ್ಶ ಗ್ರಾಮವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ಥಳೀಯ ಜನರ ಅಭಿಲಾಷೆಗೆ ಅನುಗುಣವಾಗಿ ಶಿರಂಗಾಲ ಗ್ರಾಮಕ್ಕೆ ಸರ್ಕಾರದಿಂದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಿ ನಿರ್ಮಿಸುವಲ್ಲಿ ಅವರ ವಿಶೇಷ ಶ್ರಮ ಹಾಗೂ ಕಾಳಜಿ ಕೈಗನ್ನಡಿಯಾಗಿದೆ ಎಂದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಸದಾ ಗ್ರಾಮದ ಅಭಿವೃದ್ಧಿಯ ತುಡಿತ ಹೊಂದಿದ್ದ ನಂಜುAಡಪ್ಪ ಶಿರಂಗಾಲ ಪದವಿ ಪೂರ್ವ ಕಾಲೇಜಿನ ರೂವಾರಿಯಾಗಿದ್ದರು. ತಮ್ಮನ್ನು ಸಮಾಜಮುಖಿ ಕಾರ್ಯಗಳಿಗೆ ಸಮರ್ಪಿಸಿಕೊಂಡು, ವಿಶೇಷವಾಗಿ ಶಿಕ್ಷಣ ಕ್ಷೇತ್ರ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದು ಹೇಳಿದರು.

ಮುಳ್ಳೂರು ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದ ಯೋಜನೆಗಳನ್ನು ದಕ್ಷತೆಯಿಂದ ಅನುಷ್ಠಾನಗೊಳಿಸಿದ ನಂಜುAಡಪ್ಪ, ಏಳು ದಶಕಗಳಿಗೂ ಹೆಚ್ಚು ಕಾಲ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ನಿರತರಾಗಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಹಾಗೂ ಕಲ್ಲಳ್ಳಿ ಶ್ರೀ ರುದ್ರಮುನಿ ಸ್ವಾಮೀಜಿ ನುಡಿನಮನ ಸಲ್ಲಿಸಿದರು.

ಸೋಮವಾರಪೇಟೆ ವೀರಶೈವ ಸಮಾಜದ ಮುಖಂಡ ಹಾಲಪ್ಪ, ಕುಟುಂಬಸ್ಥರಾದ ನಂಜಮ್ಮ ನಂಜುAಡಪ್ಪ, ಎಸ್.ಎನ್. ಶಶಿ, ಎಸ್.ಎನ್. ವಿಜಯ್, ಸಿ.ಎನ್. ಲೋಕೇಶ್ ಹಾಗೂ ಶಿರಂಗಾಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net