

ಮಡಿಕೇರಿ
ಕಾಫಿ, ಕರಿಮೆಣಸು ಹಾಗೂ ಭತ್ತದಂತಹ ಸಾಂಪ್ರದಾಯಿಕ ಬೆಳೆಗಳಿಗೆ ಹೆಸರಾದ ಕೊಡಗಿನಲ್ಲಿ ಅಣಬೆ ಬೇಸಾಯ ಕೃಷಿಕರಿಗೆ ಪರ್ಯಾಯ ಹಾಗೂ ಹೆಚ್ಚುವರಿ ಆದಾಯದ ಮೂಲವಾಗಿ ಬೆಳೆಯುತ್ತಿದೆ. ಕಡಿಮೆ ಜಾಗದಲ್ಲಿ, ನಿಯಂತ್ರಿತ ವಾತಾವರಣದಲ್ಲಿ ಹಾಗೂ ಕೃಷಿ ತ್ಯಾಜ್ಯಗಳನ್ನು ಬಳಸಿ ಅಣಬೆ ಉತ್ಪಾದಿಸಬಹುದಾಗಿರುವುದರಿಂದ ಸಣ್ಣ ಮತ್ತು ಅತಿಸಣ್ಣ ಕೃಷಿಕರು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಯುವ ಉದ್ಯಮಿಗಳಿಗೆ ಇದು ಸೂಕ್ತ ಕೃಷಿ ಉದ್ಯಮವಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದ್ದು, ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಹಲವರು ಈಗಾಗಲೇ ಯಶಸ್ಸು ಗಳಿಸಿದ್ದಾರೆ.
ಅಣಬೆ ಬೆಳೆಯಲು ಮಾಧ್ಯಮವಾಗಿ ಬಳಸುವ ವೈವಿಧ್ಯಮಯ ಕೃಷಿ ತ್ಯಾಜ್ಯಗಳಾದ ಭತ್ತದ ಹುಲ್ಲು, ಕಾಫಿ ಹಣ್ಣಿನ ಸಿಪ್ಪೆ, ಜೋಳದ ಸಿಪ್ಪೆ, ಮರದ ಹೊಟ್ಟುಗಳಿಗೆ ಕೊಡಗಿನಲ್ಲಿ ಕೊರತೆಯೇನೂ ಇಲ್ಲ. ಅಣಬೆ ಕೃಷಿಗೆ ವಿಸ್ತಾರವಾದ ಜಮೀನಿನ ಅಗತ್ಯವಿಲ್ಲ. ಸಣ್ಣ ಜಾಗ, ಶೆಡ್ ಅಥವಾ ಮನೆಯ ಶೇಖರಣಾ ಕೊಠಡಿಗಳಲ್ಲಿಯೇ ಇದನ್ನು ಯಶಸ್ವಿಯಾಗಿ ಮಾಡಬಹುದು. ಕಡಿಮೆ ಶ್ರಮ ಮತ್ತು ಅಲ್ಪಾವಧಿಯ ಬೆಳೆಯಾಗಿರುವುದರಿಂದ, ಗೃಹಿಣಿಯರು ಹಾಗೂ ಗ್ರಾಮೀಣ ಯುವಕರು ಸ್ವಯಂ ಉದ್ಯೋಗವಾಗಿ ಅಣಬೆ ಬೇಸಾಯವನ್ನು ಅಳವಡಿಸಿಕೊಳ್ಳಬಹುದು.
ಕೊಡಗಿನ ಹಮಾಮಾನ ಕೂಡ ಅಣಬೆ ಬೇಸಾಯಕ್ಕೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ತಜ್ಞರು. ಅದರಲ್ಲೂ ರಾತ್ರಿಯ ವಾತಾವರಣ ಹೆಚ್ಚು ಅನುಕೂಲಕರವಾಗಿದೆ. ಚೆಟ್ಟಳ್ಳಿಯಲ್ಲಿರುವ ತೋಟಗಾರಿಕೆ ಬೆಳೆಗಳ ಪ್ರಾಯೋಗಿಕ ಕೇಂದ್ರ, ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕುಶಾಲನಗರದ ಕೂಡಿಗೆಯಲ್ಲಿರುವ ಯೂನಿಯನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಕಾಲಕಾಲಕ್ಕೆ ಆಗಾಗ್ಗೆ ತರಬೇತಿಗಳನ್ನು ಕೊಡುವುದಲ್ಲದೆ ತರಬೇತಿ ನಂತರವೂ ತಾಂತ್ರಿಕ ಮಾರ್ಗದರ್ಶನ ನೀಡುವುದರಿಂದ ಆಸಕ್ತರು ಈ ಅವಕಾಶ ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದಾಗಿದೆ.
ಸ್ಥಳೀಯ ತರಬೇತಿಗಳು, ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದುಕೊಂಡು ಈಗಾಗಲೇ ಹಲವರು ಯಶಸ್ವಿಯಾಗಿ ಅಣಬೆ ಬೇಸಾಯ ಮಾಡುತ್ತಿದ್ದಾರೆ. ಇನ್ನು ಕೆಲವರು ಸ್ವಂತ ಕಂಪೆನಿಗಳನ್ನು ಆರಂಭಿಸಿ ಅಣಬೆಗಳ ಉಪ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ತಮ್ಮದೇ ಬ್ರಾಂಡ್‌ಗಳಲ್ಲಿ ಮಾರುಕಟ್ಟೆಗೆ ಬಿಡುವ ಮೂಲಕ ಉದ್ಯಮಿಗಳಾಗಿಯೂ ಹೆಸರು ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿಯನ್ನು ಮಾತ್ರ ಅವಲಂಬಿಸದೆ ವರ್ತಮಾನದ ಬೇಡಿಕೆಗಳಿಗೆ ಅನುಗುಣವಾಗಿ ಅಣಬೆ ಬೇಸಾಯ ಅಥವಾ ಉದ್ಯಮ ಆರಂಭಿಸುವ ಮೂಲಕ ಆದಾಯಕ್ಕೆ ಬೇರೆ ಮೂಲಗಳನ್ನು ಕಂಡುಕೊಳ್ಳಬಹುದು ಎನ್ನುವುದನ್ನು ಇಂಥ ಉದ್ಯಮಿಗಳು ತೋರಿಸಿಕೊಟ್ಟಿದ್ದಾರೆ.
ವಾಣಿಜ್ಯಿಕವಾಗಿ ಬೆಳೆದು ಮಾರಾಟ ಮಾಡಬಹುದಾಗ 12 ತಳಿಯ ಅಣಬೆಗಳನ್ನು ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸಿಟ್ಯೂಟ್ ಆಫ್ ಹಾರ್ಟಿಕಲ್ಚರ್ ವಿಜ್ಞಾನಿಗಳು ಗುರುತಿಸಿ ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಬಹುತೇಕ ತಳಿಗಳನ್ನು ಕೊಡಗಿನಲ್ಲಿ ಬೆಳೆಯಬಹುದಾದರೂ ಭತ್ತದ ಹುಲ್ಲು ಮತ್ತು ಕಾಫಿ ಸಿಪ್ಪೆಯನ್ನು ಬಳಸಿ ಬೆಳೆಸಬಹುದಾದ ಹೆಚ್ಚು ರೋಗನಿರೋಧಕ ಶಕ್ತಿ ಮತ್ತು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ನೀಡುವ ಚಿಪ್ಪಿನ ಅಣಬೆ, ತಂಪಾದ ಹವಾಮಾನದಲ್ಲಿ ಅತ್ಯುತ್ತಮವಾಗಿ ಬೆಳೆಯುವ, ಅತ್ಯಂತ ಹೆಚ್ಚಿನ ವಾಣಿಜ್ಯ ಮೌಲ್ಯ ಹೊಂದಿರುವ ಬಟನ್ ಅಣಬೆ, ಕೊಡಗಿನ ಬೇಸಿಗೆಯ ಬಿಸಿ ವಾತಾವರಣಕ್ಕೆ ಸೂಕ್ತವಾದ, ದೀರ್ಘಾವಧಿಯ ಬಾಳಿಕೆ ಹೊಂದಿದ್ದು, ದೂರದ ಮಾರುಕಟ್ಟೆಗೆ ಸಾಗಿಸಲು ಅನುಕೂಲಕರ ಆಗಿರುವ ಮಿಲ್ಕಿ ಅಣಬೆಗಳನ್ನು ಇಲ್ಲಿಗೆ ತಜ್ಞರು ಶಿಫಾರಸ್ಸು ಮಾಡುತ್ತಾರೆ.
ಅಣಬೆ ಬೆಳೆಯಲು ಸಾಧಾರಣವಾಗಿ 20 ಡಿ.ಸೆ. ನಿಂದ 30 ಡಿ.ಸೆ. ತಾಪಮಾನ ಬೇಕಾಗುತ್ತದೆ. ಕೊಡಗಿನಲ್ಲಿ ವರ್ಷಪೂರ್ತಿ ಇರುವ ತಂಪಾದ ಹವಾಮಾನ ಬಟನ್ ಮತ್ತು ಚಿಪ್ಪಿನ ಅಣಬೆ ಉತ್ಪಾದನೆಗೆ ಸೂಕ್ತವಾಗಿದೆ. ಅಣಬೆಗಳ ಉತ್ತಮ ಬೆಳವಣಿಗೆಗೆ ಶೆ. 80ರಿಂದ ಶೇ, 90 ಸಾಪೇಕ್ಷ ಆರ್ದ್ರತೆಯ ಅವಶ್ಯಕತೆಯಿದೆ. ಕೊಡಗಿನಲ್ಲಿ ಮುಂಗಾರು ಹಾಗೂ ತದನಂತರದ ಅವಧಿಯಲ್ಲಿ ನೈಸರ್ಗಿಕವಾಗಿಯೇ ಹೆಚ್ಚಿನ ಆರ್ದ್ರತೆ ಇರುವುದರಿಂದ ನೈಸರ್ಗಿಕ ಬೆಳೆಗಾರರಿಗೆ ವೆಚ್ಚ ಕಡಿಮೆಯಾಗುತ್ತದೆ.
ಕೊಡಗು ಪ್ರವಾಸೋದ್ಯಮದ ಕೇಂದ್ರವಾಗಿರುವುದರಿAದ ಅಣಬೆಗೆ ಸ್ಥಳೀಯವಾಗಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಒಳ್ಳೆಯ ಮಾರುಕಟ್ಟೆ ಲಭ್ಯವಿದೆ. ಕೊಡಗಿನಲ್ಲಿ ನೂರಾರು ಹೋಂಸ್ಟೇ, ಹೋಟೆಲ್ ಹಾಗೂ ರೆಸಾರ್ಟ್ಗಳಿದ್ದು, ಪ್ರವಾಸಿಗರಿಗೆ ಅಣಬೆ ಖಾದ್ಯಗಳನ್ನು ಉಣಬಡಿಸಲು ದಿನನಿತ್ಯ ತಾಜಾ ಅಣಬೆಗೆ ಹೆಚ್ಚಿನ ಬೇಡಿಕೆ ಇದೆ. ಮಡಿಕೇರಿ, ವಿರಾಜಪೇಟೆ, ಗೋಣಿಕೊಪ್ಪಲು, ಕುಶಾಲನಗರದ ಸ್ಥಳೀಯ ಚಿಲ್ಲರೆ ಮಾರುಕಟ್ಟೆಗಳ ಜತೆಗೆ ಮೈಸೂರು, ಮಂಗಳೂರು ಹಾಗೂ ಕೇರಳದ ಗಡಿ ಪ್ರದೇಶಗಳಿಗೆ ಸುಲಭವಾಗಿ ಪೂರೈಸಬಹುದಾಗಿದೆ.
ತಾಜಾ ಅಣಬೆ ಮಾರಾಟದ ಜತೆಗೆ ಹೆಚ್ಚುವರಿ ಅಣಬೆಯನ್ನು ಒಣಗಿಸಿ ಅಣಬೆ ಪೌಡರ್, ಅಣಬೆ ಉಪ್ಪಿನಕಾಯಿ, ಅಣಬೆ ಸೂಪ್ ಮಿಕ್ಸ್ ಸೇರಿದಂತೆ ಸಾಕಷ್ಟು ಉಪ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಅವಕಾಶಗಳೂ ಇವೆ. ಚಿಪ್ಪಿನ ಅಣಬೆ ಬೀಜ ಬಿತ್ತಿದ 20 ರಿಂದ 25 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಇದರಿಂದ ಕೃಷಿಕರು ಪ್ರತಿ ತಿಂಗಳು ನಿರಂತರ ಆದಾಯ ಪಡೆಯಬಹುದು. ಕೇವಲ 50-60 ರೂ. ವೆಚ್ಚದಲ್ಲಿ ಉತ್ಪಾದಿಸುವ ಒಂದು ಕೆಜಿ ಅಣಬೆಯನ್ನು ಮಾರುಕಟ್ಟೆಯಲ್ಲಿ 200 ರಿಂದ 350 ರೂ. ತನಕ ಮಾರಾಟ ಮಾಡಬಹುದಾಗಿದೆ ಎನ್ನುತ್ತಾರೆ ತಜ್ಞರು.
ಅಣಬೆ ಬೆಳೆಯಲು ಕೊಡಗಿನ ಹವಾಮಾನ ಸೂಕ್ತವಾಗಿದೆ. ನಮ್ಮಲ್ಲಿ ಸುಮಾರು 12 ತಳಿಯ ಅಣಬೆಗಳ ಬೀಜಗಳು ಲಭ್ಯವಿದೆ. ಎಲ್ಲಾ ತಾಪಮಾನದಲ್ಲಿ ಬೆಳೆಯುವ ಅಣಬೆಗಳು ಸಿಗುತ್ತದೆ. ಅಣಬೆ ಬೆಳೆಯಲು 5 ದಿನಗಳ ವಿಶೇಷ ತರಬೇತಿ ನಮ್ಮಲ್ಲಿ ಕೊಡಲಾಗುವುದು. ಅಣಬೆ ಬೀಜ ಉತ್ಪಾದನೆಗೂ ಹೆಚ್ಚಿನ ಅವಕಾಶ ಇದ್ದು, ಈ ಕುರಿತೂ ತರಬೇತಿ ನೀಡಲಾಗುತ್ತದೆ. ಸರಿಯಾದ ತಾಂತ್ರಿಕ ಮಾರ್ಗದರ್ಶನದೊಂದಿಗೆ ಅಣಬೆ ಕೃಷಿ ಆರಂಭಿಸಿದರೆ ಆರ್ಥಿಕವಾಗಿ ಒಳ್ಳೆಯ ಲಾಭ ಗಳಿಸಬಹುದು.
ಡಾ. ಚಂದ್ರಶೇಖರ್, ಹಿರಿಯ ವಿಜ್ಞಾನಿ, ಇಂಡಿಯನ್ ಇನ್ಸಿಟ್ಯೂಟ್ ಆಫ್ ಹಾರ್ಟಿಕಲ್ಚರ್, ಬೆಂಗಳೂರು
ಅಣಬೆ ಬೇಸಾಯದಲ್ಲಿ ಉತ್ತಮ ಲಾಭವಿದೆ. ಗುಣಮಟ್ಟದ ಅಣಬೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯೂ ಇದೆ. ನಾವು ಕಳೆದ 10 ವರ್ಷಗಳಿಂದ ಅಣಬೆ ಬೆಳೆಯುತ್ತಿದ್ದೇವೆ. ಹಾಸನ ಮತ್ತು ಕೊಡಗು ಜಿಲ್ಲೆಯ ಬಹುತೇಕ ಕಡೆಗಳಿಗೆ ನಾವು ಬೆಳೆದ ಅಣಬೆ ಪೂರೈಕೆ ಮಾಡಲಾಗುತ್ತಿದೆ. ಅಣಬೆ ಬೆಳೆಯಲು ತರಬೇತಿ ಪಡೆದುಕೊಳ್ಳುವುದು ಮುಖ್ಯ. ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಶುರು ಮಾಡಿ ಅನುಭವ ಸಿಕ್ಕಿದ ನಂತರ ಹೆಚ್ಚು ಪ್ರಮಾಣದಲ್ಲಿ ವಾಣಿಜ್ಯಿಕವಾಗಿ ಬೆಳೆಯಬಹುದು.
ಸರ್ಜಿಲ್ ಹಸನ್, ಅಣಬೆ ಕೃಷಿಕ, ಕೊಡ್ಲಿಪೇಟೆ ನಾನು ಕಳೆದ ಕೆಲವು ವರ್ಷಗಳಿಂದ ಅಣಬೆ ಬೆಳೆಯುತ್ತಿದ್ದೇನೆ. ತಿಂಗಳಿಗೆ ಸುಮಾರು 80 ಸಾವಿರ ರೂ.ಗಳಷ್ಟು ಆದಾಯ ಇದರಿಂದ ಬರುತ್ತಿದೆ. ಅಣಬೆ ಬೇಸಾಯದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಈ ಬೆಳೆ ಲಾಭದಾಯಕವಾಗಿದೆ. 100 ರೂ. ಖರ್ಚು ಮಾಡಿದರೆ 500 ರೂ. ಆದಾಯ ಬರುತ್ತದೆ. ಆದರೆ ಅಷ್ಟೇ ಸೂಕ್ಷö್ಮವಾಗಿ ಕೆಲಸ ಮಾಡಬೇಕು. ನಾವೇ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡರೆ ಉತ್ತಮ. ಸದ್ಯಕ್ಕಂತೂ ಒಳ್ಳೆಯ ಬೇಡಿಕೆ ಇದೆ.
ಚೆಟ್ಟಿಮಾಡ ಯೋಗೇಶ್, ಅಣಬೆ ಬೆಳೆಗಾರ, ಹೊದ್ದೂರು
ಅಣಬೆಯ ಉಪ ಉತ್ಪನ್ನಗಳಿಗೂ ಹೆಚ್ಚಿನ ಬೇಡಿಕೆ ಇದೆ. ನಾವು ನಮ್ಮ ಕಂಪೆನಿ ಮೂಲಕ ಅಣಬೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತೇವೆ. ಅಣಬೆ ಸೂಪ್, ಸಾಂಬಾರ್ ರಸಂ ಪುಡಿ, ಸಲಾಡ್, ಉಪ್ಪಿನಕಾಯಿಗಳನ್ನು ಮಾಡಲಾಗುತ್ತದೆ. ಇವು ಆರೋಗ್ಯಕ್ಕೆ ಪೂರಕವಾಗಿದೆ. ಅಣಬೆ ಜತೆಗೆ ತೆಂಗಿನ ಕಾಯಿ, ಎಳ್ಳು, ಕಡಲೆ, ನುಗ್ಗೆ ಸೊಪ್ಪು ಹೀಗೆ ವಿವಿಧ ವಸ್ತುಗಳನ್ನು ಬಳಸಿ ಸಾಕಷ್ಟು ಉತ್ಪನ್ನಗಳನ್ನು ತಯಾರಿಸುವ ಅವಕಾಶಗಳಿದ್ದು ಈ ಉತ್ಪನ್ನಗಳಿಗೆ ದೊಡ್ಡ ಮಟ್ಟದ ಬೇಡಿಕೆಯೂ ಇದೆ.
ಎಂ. ದೀಪ್ನಾ ವಿವೇಕ್, ಉದ್ಯಮಿ, ಅಮ್ಮತ್ತಿ