

ಮಡಿಕೇರಿ:
ರಾಜಸೀಟ್ ರಸ್ತೆ ಕಾಮಗಾರಿಯನ್ನು ಅಕ್ಟೋಬರ್ 25ರಿಂದಲೇ ಕಡ್ಡಾಯವಾಗಿ ಆರಂಭಿಸಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನಗರಸಭೆ ಪೌರಾಯುಕ್ತ ಹೆಚ್.ಆರ್. ರಮೇಶ್ ಅವರಿಗೆ ಸೂಚಿಸಿದರು. ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಅವರ ಅಧ್ಯಕ್ಷತೆಯಲ್ಲಿ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪೌರಾಯುಕ್ತರು ಹಾಗೂ ನಗರಸಭೆ ಸಿಬ್ಬಂದಿಯ ಕಾರ್ಯವೈಖರಿ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಸಂಪೂರ್ಣ ಹದಗೆಟ್ಟಿರುವ ರಾಜಾಸೀಟ್ ರಸ್ತೆ ದುರಸ್ತಿಗೆ ಆಗಸ್ಟ್ 15ರಂದೇ ಭೂಮಿ ಪೂಜೆ ನೆರವೇರಿಸಲಾಗಿತ್ತು. ದಸರಾ ಉತ್ಸವದೊಳಗಾಗಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದರೆ, ಯಾವುದೇ ಕೆಲಸ ನಡೆದಿಲ್ಲ. ದಸರಾ ಸಮಯದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಸಂಚರಿಸುವ ಪ್ರಮುಖ ರಸ್ತೆಯ ಸ್ಥಿತಿ ಹೀಗಿರುವುದು ತೀವ್ರ ಬೇಸರ ತಂದಿದೆ.
ಜಿಲ್ಲಾಧಿಕಾರಿ ಸೇರಿದಂತೆ ಸಂಬAಧಪಟ್ಟ ಅಧಿಕಾರಿಗಳ ವೈಫಲ್ಯ ಇಲ್ಲಿ ಎದ್ದು ಕಾಣುತ್ತಿದೆ. ಹಣಕಾಸಿನ ಕೊರತೆಯೂ ಇಲ್ಲದಿರುವಾಗ ರಾತ್ರೋರಾತ್ರಿ ಕೆಲಸ ಮಾಡಿ ಮುಗಿಸಬೇಕಿತ್ತು. ಜಿಲ್ಲಾಧಿಕಾರಿ ಕಚೇರಿಗೆ ಅನುಕೂಲ ಕಲ್ಪಿಸುವುದಕ್ಕಿಂತ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವುದು ಮುಖ್ಯ. ನಗರದ ಇತರ ಭಾಗಗಳಲ್ಲಿ ರಸ್ತೆ ಕೆಲಸ ಮುಗಿದಿದ್ದರೂ ರಾಜಾಸೀಟ್ ರಸ್ತೆ ಕಾಮಗಾರಿ ಮಾತ್ರ ನೆನೆಗುದಿಗೆ ಬಿದ್ದಿರುವುದಕ್ಕೆ ಆಯುಕ್ತರು ಸ್ಪಷ್ಟನೆ ನೀಡಬೇಕು ಎಂದು ತರಾಟೆಗೆ ತೆಗೆದುಕೊಂಡರು.
Áಂಧಿ ಮೈದಾನದಲ್ಲಿ ವೇದಿಕೆ ನಿರ್ಮಾಣ, ಕಾವೇರಿ ಕಲಾಕ್ಷೇತ್ರದ ಕಾಮಗಾರಿಗಳು ಸ್ಥಗಿತಗೊಂಡಿರುವ ಬಗ್ಗೆ ಹಾಗೂ ತ್ಯಾಜ್ಯ ವಿಲೇವಾರಿ ವರದಿ ನೀಡದಿರುವ ಬಗ್ಗೆಯೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು
Áಸಕರ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತ ಹೆಚ್.ಆರ್. ರಮೇಶ್, ರಾಜಾಸೀಟ್ ರಸ್ತೆಯನ್ನು ಸಂಪೂರ್ಣ ಬ್ಲಾಕ್ ಮಾಡಿ ಕೆಲಸ ಮಾಡಲು ಅವಕಾಶ ಸಿಗಲಿಲ್ಲ. ಆದ್ದರಿಂದ ದಸರಾ ಅವಧಿಯಲ್ಲಿ ರಸ್ತೆಗೆ ಎಂ-ಸ್ಯಾAಡ್ ಹಾಕಿ 9 ದಿನಗಳ ಕಾಲ ನಿರ್ವಹಣೆ ಮಾಡಲಾಗುವುದು. ಅಕ್ಟೋಬರ್ 25ರಿಂದ ಕಾಮಗಾರಿ ಆರಂಭಿಸಲಾಗುವುದು ಎಂದರು. ಕಾವೇರಿ ಕಲಾಕ್ಷೇತ್ರಕ್ಕೆ ಸ್ಥಳ ದಾನಿಗಳಾದ ಕೊರವಂಡ ನಂಜಪ್ಪ ಅವರ ಹೆಸರು ಮರುನಾಮಕರಣ ಮಾಡುವ ಬೇಡಿಕೆ ಇದೆ ಎಂದು ತಿಳಿಸಿದ ಅವರು, ಮೆಟೀರಿಯಲ್ಸ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಕೇಂದ್ರದ ಕೆಲಸವನ್ನು ತಕ್ಷಣ ಆರಂಭಿಸುವುದಾಗಿ ಹೇಳಿದರು. ಮಳೆಗಾಲಕ್ಕೆ ಮುನ್ನ ಹಾಗೂ ನಂತರ ರಸ್ತೆ ಕಾಮಗಾರಿ ನಡೆಸಬೇಕು, ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಅಮೃತ್-2 ಯೋಜನೆಯಡಿ ಎಲ್ಲಾ ಮನೆಗಳಿಗೂ ಕುಡಿಯುವ ನೀರು ಸಂಪರ್ಕ ಕಲ್ಪಿಸಬೇಕು ಮತ್ತು ಸ್ಟೋನ್ ಹಿಲ್‌ನಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆದು ನಗರಸಭೆ ಕಚೇರಿ ಬಳಿಯಲ್ಲೇ ವಿಲೇವಾರಿ ಕೇಂದ್ರ ನಿರ್ವಹಿಸಬೇಕು ಎಂದು ಶಾಸಕರು ಒತ್ತಾಯಿಸಿದರು. ಪೌರಕಾರ್ಮಿಕರ ವಿರುದ್ಧ ಅವಾಚ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಅಂತಹವರ ಮನೆಯಿಂದ ಕಸ ಸಂಗ್ರಹಿಸದAತೆ ಸೂಚಿಸಿದರು.
ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ರಸ್ತೆ ದುರಸ್ತಿಗೆ 40 ಲಕ್ಷ ರೂ. ವೆಚ್ಚ ನಿರ್ಧರಿಸಿದ್ದರೂ ಕೇವಲ 20 ಲಕ್ಷ ರೂ.ಗೆ ಟೆಂಡರ್ ಕರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಅಪ್ಪಣ್ಣ ಮಾತನಾಡಿ, ಪ್ಯಾಚ್ ವರ್ಕ್ ಕೆಲಸ ಒಂದೇ ಕಡೆ ಸರಿಯಾಗಿ ನಡೆಯುತ್ತಿಲ್ಲ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ ಕಾಮಗಾರಿ ಅಪೂರ್ಣಗೊಂಡಿದೆ ಎಂದು ದೂರಿದರು.
ಎಸ್‌ಡಿಪಿಐನ ಎಂ.ಕೆ. ಮನ್ಸೂರ್ ಅಹಮ್ಮದ್ ಹಾಗೂ ಕಾಂಗ್ರೆಸ್‌ನ ರಾಜೇಶ್ ಯಲ್ಲಪ್ಪ ಮಾತನಾಡಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿದ್ದು, ನಗರಸಭೆಗೆ ಕೆಟ್ಟ ಹೆಸರು ಬರಲು ನಿಮ್ಮ ನಡುವಿನ ರಾಜಕೀಯವೇ ಕಾರಣ ಎಂದು ಟೀಕಿಸಿದರು. ಬಿಜೆಪಿಯ ಅನಿತಾ ಪೂವಯ್ಯ ಮಾತನಾಡಿ, ಮುಖ್ಯ ರಸ್ತೆಗಳ ಜತೆಗೆ ವಾರ್ಡ್ಗಳ ಒಳ ರಸ್ತೆಗಳ ದುರಸ್ತಿಗೂ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.