ದತ್ತಿ ಉಪನ್ಯಾಸ ಜ್ಞಾನ ವೃದ್ಧಿಗೆ ಪೂರಕ

ಮುಖ್ಯ ಶಿಕ್ಷಕಿ ಡೈಸಿ ಅಭಿಮತ
ವಿದ್ಯಾರ್ಥಿನಿ ಹರ್ಷಿತಾಗೆ ಕಡಗದಳು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕಸಾಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದತ್ತಿ ಪುರಸ್ಕಾರ
ಎಸ್ಸೆಸ್ಸೆಲ್ಸಿ ಪರೀಕ್ಷೆ ಕನ್ನಡ ಮಾಧ್ಯಮದಲ್ಲಿ ಮಡಿಕೇರಿ ತಾಲೂಕಿಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಹರ್ಷಿತಾಗೆ ಕಡಗದಳು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕಸಾಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುಖ್ಯ ಶಿಕ್ಷಕಿ ಸಿ.ಸಿ. ಡೈಸಿ, ದಂಬೆಕೋಡಿ ಲೀಲಾ ಚಿಣ್ಣಪ್ಪ, ಮೃಣಾಲಿ ಚಿಣ್ಣಪ್ಪ, ಕೊರವಂಡ ರೇವತಿ ತಿಮ್ಮಯ್ಯ ಇತರರು ಇದ್ದರು. harshita
Published on: 

ನಾಪೋಕ್ಲು: ಶಾಲಾ ಹಂತದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪೂರಕವಾಗಿವೆ ಎಂದು ಕಡಗದಳು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿ.ಸಿ.ಡೈಸಿ ಹೇಳಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕಡಗದಳು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ದಿ. ಮಂಡೆಪಂಡ ಅಕ್ಕಮ್ಮ ಗಣಪತಿ ದತ್ತಿ ಉಪನ್ಯಾಸ ಹಾಗೂ ದಂಬೆಕೋಡಿ ಚಿಣ್ಣಪ್ಪ ದತ್ತಿ ಪುರಸ್ಕಾರ ಪ್ರದಾನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಕೆ. ಜಿ. ದಿವಾಕರ ‘ಕೊಡಗು ಜಿಲ್ಲೆಯ ಮಹಿಳಾ ಸಾಹಿತಿಗಳು’ ವಿಷಯ ಕುರಿತು ದತ್ತಿ ಉಪನ್ಯಾಸ ನೀಡಿ, ಕೊಡಗಿನ ಮಹಿಳೆಯರು ಸಾಹಿತ್ಯ ರಂಗದಲ್ಲೂ ತಮ್ಮ ಛಾಪು ಮೂಡಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದರು. ಸಾಹಿತ್ಯ ಪರಿಷತ್ತಿನಿಂದ ಕೂಡಮಾಡುವ ಹಲವು ದತ್ತಿ ಪ್ರಶಸ್ತಿಗಳಿಗೆ ಮಹಿಳೆಯರೂ ಭಾಜನರಾಗಿದ್ದಾರೆ. ಕೊಡಗಿನ ಗೌರಮ್ಮ ಪ್ರಶಸ್ತಿಯನ್ನು ಜಿಲ್ಲೆಯ 23 ಮಹಿಳಾ ಸಾಹಿತಿಗಳು ಸ್ವೀಕರಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಸಾಧನೆ ಮಾಡಿ: ನಿವೃತ್ತ ಶಿಕ್ಷಕಿ ಕೊರವಂಡ ರೇವತಿ ತಿಮ್ಮಯ್ಯ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಏನಾದರೂ ಸಾಧನೆ ಮಾಡಬಹುದು ಎಂದರು. ವಿದ್ಯಾರ್ಥಿಗಳು ಸತ್ವಯುತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ನಿಗದಿತ ಪಠ್ಯಕ್ರಮ ಅಧ್ಯಯನ, ಗುರು ಹಿರಿಯರ ಮಾರ್ಗದರ್ಶನ ಪಾಲನೆ ಮಾಡಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಕಿವಿಮಾತು ಹೇಳಿದರು.

ತಂತ್ರಜ್ಞಾನದಿಂದ ಅನುಕೂಲವಾಗಬೇಕು: ತಾಲೂಕು ಕಸಾಪ ಅಧ್ಯಕ್ಷೆ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತರ್ಜಾಲ ಬಳಕೆ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಿ ಇರಬೇಕು ಎಂದರು. ಮಾಹಿತಿಗಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಬೇಕು. ಕೇವಲ ಮನರಂಜನೆಯಿಂದ ಹೆಚ್ಚಿನ ಲಾಭವಿಲ್ಲ ಎಂದರು. ಜಗತ್ತಿನ ಯಾವುದೇ ಮೂಲೆಯ ಶೈಕ್ಷಣಿಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಸಾಮಾಜಿಕ ಜಾಲ ತಾಣವನ್ನು ಅವಶ್ಯಕತೆಗೆ ಮಾತ್ರ ಬಳಸಿಕೊಳ್ಳಬೇಕು. ತಂತ್ರಜ್ಞಾನದಿಂದ ಅನುಕೂಲವಾಗಬೇಕು. ಅವಾಂತರ ಆಗಬಾರದು ಎಂದರು.

ಈ ಸಂದರ್ಭ 2025 26 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಮಡಿಕೇರಿ ತಾಲೂಕಿಗೆ ಅತಿ ಹೆಚ್ಚು ಅಂಕ ಗಳಿಸಿದ ಕಡಗದಾಳು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಬಿ ಎಸ್ ಇವರಿಗೆ ದಿ. ದಂಬೆಕೋಡಿ ಚಿನ್ನಪ್ಪ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ದತ್ತಿ ದಾನಿಗಳಾದ ದಂಬೆಕೋಡಿ ಲೀಲಾ ಚಿಣ್ಣಪ್ಪ, ಮೃಣಾಲಿ ಚಿಣ್ಣಪ್ಪ, ತಾಲೂಕು ಕಸಾಪ ನಿರ್ದೇಶಕಿ ಗೌರಮ್ಮ, ಗೌರವ ಕಾರ್ಯದರ್ಶಿ ಗುಡ್ಡೆರ ಲಕ್ಷು ಸೋಮಣ್ಣ ಇದ್ದರು. ಇದೇ ಸಂದರ್ಭ ಕೊರವಂಡ ತಿಮ್ಮಯ್ಯ ಮತ್ತು ರೇವತಿ ದಂಪತಿ ಕಸಾಪ ದತ್ತಿ ಸ್ಥಾಪನೆಗೆ ರೂ. 2, 50, 000 ಚೆಕ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net