ಸುಂಟಿಕೊಪ್ಪ : ವಾಹನ ಚಾಲಕರ ಸಂಘದ ವಾಹನ ನಿಲ್ದಾಣಕ್ಕೆ ಚಾವಣಿ ನಿರ್ಮಾಣ ಪ್ರಗತಿಯಲ್ಲಿದ್ದು, ಕೆಲವು ತಾಂತ್ರಿಕ ಅಡಚಣೆಗಳನ್ನು ಸರಿಪಡಿಸಿಕೊಂಡು ಶೀಘ್ರ ಲೋಕಾರ್ಪಣೆ ಮಾಡಲಾಗುವುದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ಗೌಡ ಹೇಳಿದ್ದಾರೆ.
ವಾಹನಚಾಲಕರ ಸಂಘದ 56ನೇ ವಾರ್ಷಿಕೋತ್ಸವದ ಆಯುಧಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ರೂ.40 ಲಕ್ಷ ವೆಚ್ಚದ ಚಾವಣಿ ಕಾಮಗಾರಿ ಆರಂಭಿಕ ಹಂತದಲ್ಲಿದ್ದು, ಹೆಚ್ಚು ಅನುದಾನ ಬೇಕಾಗುವ ನಿರೀಕ್ಷೆ ಇದೆ. ಈ ಅನುದಾನವನ್ನು ನಾನೇ ಭರಿಸಲಿದ್ದು, ಕಾಮಗಾರಿಯನ್ನು ಅದಷ್ಟು ಶೀಘ್ರ ಮುಕ್ತಾಯಗೊಳಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ವಾಹನ ಚಾಲಕರ ಸಂಘಕ್ಕೆ ಅದ್ಭುತವಾದ ಇತಿಹಾಸವಿದ್ದು, ವಾಹನ ಚಾಲಕರು ಬದಲಾದ ಕಾಲಘಟ್ಟದಲ್ಲಿ ಚಾಲಕರು ಸುರಕ್ಷತೆಯಿಂದ ವಾಹನ ಚಲಾಯಿಸುವುದರ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಇದನ್ನು ಚಾಲಕರು ಗಮನದಲ್ಲಿಟ್ಟುಕೊಂಡು ತಮ್ಮ ಕೆಲಸ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸುಂಟಿಕೊಪ್ಪ ಮೂಲಕದ ಆಧ್ಯಾತ್ಮಿಕ ಗುರು ರೋಶಿನಿ ರಾಮಪುರಂ ಅವರ ದಿ ಅಮರನಾಥಕೊಡ್ ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಯಿತು.
ಮುಖ್ಯ ಅತಿಥಿಗಳಲ್ಲಿ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸುಂಟಿಕೊಪ್ಪ ವಾಹನ ಚಾಲಕರು ಮತ್ತು ಮಾಲೀಕರ ಸಂಘಕ್ಕೆ ಭವ್ಯವಾದ ಹಿರಿಮೆಯಿದೆ. ಸುಂಟಿಕೊಪ್ಪದ ಅಭಿವೃದ್ಧಿ ಹಂತಗಳಲ್ಲಿ ಸಂಘದ ಕೊಡುಗೆ ಅಪಾರವಾಗಿದೆ. ಆನೇಕ ಬೇಡಿಕೆಗಳ ಈಡೇರಿಕೆಗೆ ಈ ವೇದಿಕೆ ಅವಕಾಶ ಕಲ್ಪಿಸಿದೆ. ಆಯುಧಾಪೂಜೆ ವಿಜಯದಶಮಿಯ ಸಂದೇಶವಾದ ದುಷ್ಟಶಿಕ್ಷಣ ಶಿಷ್ಟರಕ್ಷಣಾ ಸಂದೇಶವು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ಕುಮಾರ್ ಮಾತನಾಡಿ ಸುಂಟಿಕೊಪ್ಪ ವಾಹನ ಚಾಲಕರ ವೇದಿಕೆಯು ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯರಾದ ಪಿ.ಎಂ.ಲತೀಫ್, ಬಿ.ಬಿ.ಭಾರತೀಶ್, ಗ್ರಾಪಂ ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಪಿಡಿಒ ವಿ.ಜಿ.ಲೋಕೇಶ್, ಎಡಿಕೇರಿ ಪ್ರಸನ್ನ, ರೋಶಿನಿ ರಾಪುರಂ, ಪ್ರಸಾದ್ಕುಟ್ಟಪ್ಪ, ಪಿ.ಎಲ್ ಹರ್ಷದ್, ಎ.ಎಂ.ಹಕೀಂ, ರಫೀಕ್ಖಾನ್ ಇತರರ ಮಾತನಾಡಿದರು.
ಇದೇ ವೇಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮಾತನಾಡಿ. ರೋಶನಿ ರಾಮಪುರಂ ಅವರು ತಮ್ಮ ತಂದೆಯ ಸ್ಮರಣಾರ್ಥ ಮೃತದೇಹಗಳನ್ನು ಸಂರಕ್ಷಿಸಿಡುವ ಶೀತಲೀಕರಣ ಪೆಟ್ಟಿಯನ್ನು ವಾಹನ ಚಾಲಕರ ಸಂಘಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ. ಜತೆಗೆ ಬಸ್ ನಿಲ್ದಾಣದಲ್ಲಿ ಶುದ್ಧ ನೀರಿನ ಘಟಕವನ್ನು ಪಿಎಸಿಸಿಎಸ್ ಅಧ್ಯಕ್ಷ ಜೆರ್ಮಿಡಿಸೋಜ ಅವರು ನಿರ್ಮಿಸಿಕೊಡಲಿದ್ದಾ ಎಂದು ತಿಳಿಸಿದರು.
ವೇದಿಕೆಯಲ್ಲಿ ಉದ್ಯಮಿ ವಿಲಿಯಂ, ಆಶಾ ಟೋಮಿ, ದಾನಿ ಜಯಣ್ಣ, ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ, ಆಟೋ ಚಾಲಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್ ಮತ್ತಿತರರು ಇದ್ದರು.
ಕಾರ್ಯಕ್ರಮದ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಕೆದಕಲ್ ಗ್ರಾಪಂ ಮಾಜಿ ಉಪಾಧ್ಯಕ್ಷ ಸಂಜುಪೊನ್ನಪ್ಪ, ಪಿಎಸಿಸಿಎಸ್ ಉಪಾಧ್ಯಕ್ಷ ಪಟ್ಟೆಮನೆ ಉದಯಕುಮಾರ್ ನೇರವೇರಿಸಿದರು.ಇದೇ ಸಂದರ್ಭದಲ್ಲಿ ಶಾಸಕ ಡಾ.ಮಂತರ್ಗೌಡ ಅವರನ್ನು ವಾಹನ ಚಾಲಕರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ಜನರ ಮನಸೋರೆಗೊಂಡಿತು. ಜತೆಗೆ ಅಲಂಕೃತ ವಾಹನಗಳು, ಮಕ್ಕಳ ಮಂಟಪಗಳು ಗಮನ ಸೆಳೆದವು. ಹಬ್ಬದ ಪ್ರಯುಕ್ತ ದೀಪಾಲಂಕಾರಗಳಿಂದ ಕಚೇರಿ, ಕಡ್ಡಗಳು ಇನ್ನಿತರ ಅಂಗಡಿ, ಮುಂಗಟ್ಟುಗಳು ಕಂಗೊಳಿಸಿದವು.