ಕೊಡಗಿನಲ್ಲಿ 58,893 ಮತದಾರರಿಗೆ ನೋಟೀಸ್

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026ರ ಕರಡು ಮತದಾರರ ಪಟ್ಟಿಯನ್ನು ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಿಗೆಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಸ್ತಾಂತರಿಸಿದರು. ಸಜಿಲ್ ಕೃಷ್ಣ, ಭೋಜಣ್ಣ ಸೋಮಯ್ಯ ಮತ್ತಿತರರು ಇದ್ದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026ರ ಕರಡು ಮತದಾರರ ಪಟ್ಟಿಯನ್ನು ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಿಗೆಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಸ್ತಾಂತರಿಸಿದರು. ಸಜಿಲ್ ಕೃಷ್ಣ, ಭೋಜಣ್ಣ ಸೋಮಯ್ಯ ಮತ್ತಿತರರು ಇದ್ದರು.
Published on
ಮಡಿಕೇರಿ:
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026ರ ಕರಡು ಮತದಾರರ ಪಟ್ಟಿ ಸೋಮವಾರ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆಯಲ್ಲಿ 4,05,803 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ. ಮತದಾರರ ಸಂಖ್ಯೆ ಆಧಾರದಲ್ಲಿ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳನ್ನು ಪುನರ್‌ವಿಂಗಡಣೆ ಮತ್ತು ವಿಭಜನೆ ಮಾಡಲಾಗಿದ್ದು 552 ಇದ್ದ ಮತಗಟ್ಟೆಗಳ ಸಂಖ್ಯೆ 567ಕ್ಕೆ ಏರಿದೆ. 2026ರ ಜೂ. 16ಕ್ಕೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 4,68,657 ಮತದಾರರ ಸಂಖ್ಯೆ ಇದ್ದು, ಈ ಪೈಕಿ 4,05,803 ಮತದಾರರಿಂದ ಗಣತಿ ನಮೂನೆಗಳನ್ನು ಸಂಗ್ರಹಿಸಿ ಡಿಜಿಟಲೀಕರಣ ಮಾಡಲಾಗಿದೆ. ಈ ಮೂಲಕಕ ಶೇ. 86.59ರಷ್ಟು ಡಿಜಿಟಲೀಕರಣ ಮಾಡಿದಂತೆ ಆಗಿದೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದೀಗ ಕರಡು ಮತದಾರರ ಪಟ್ಟಿ ಪ್ರಕಟಣೆಯಾಗಿದ್ದು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆ. 23ರ ತನಕ ಕಾಲಾವಕಾಶ ಇದೆ. ಸೂಚನೆ ಹಂತ, ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಅ.22ರ ತನಕ ಅವಕಾಶ ಮಾಡಿಕೊಡಲಾಗಿದೆ. ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ.
ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ಸಮಯದಲ್ಲಿ ವಿವಿಧ ಕಾರಣಗಳಿಂದ 62,854 ಮತದಾರರು ಗಣತಿ ನಮೂನೆಗಳನ್ನು ಸಲ್ಲಿಸದೇ ಇರುವುದನ್ನು ಗುರುತು ಮಾಡಲಾಗಿದೆ. ಇದರಲ್ಲಿ ಮೃತಪಟ್ಟ ಮತದಾರರು 13731, ಶಾಶ್ವತವಾಗಿ ಸ್ಥಳಾಂತರಗೊAಡ ಮತದಾರರು 33,381,
ಎರಡು ಕಡೆ ಹೆಸರು ಹೊಂದಿರುವ ಮತದಾರು 6,046, ಗೈರು ಮತದಾರರ ಸಂಖ್ಯೆ 9,580 ಹಾಗೂ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ ಇರುವ ಮತದಾರರು 116 ಇದ್ದಾರೆ.
ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆಗಳಲ್ಲಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕಂದಾಯಾಧಿಕಾರಿಗಳ ಕಚೇರಿಯಲ್ಲಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ, ತಾಲೂಕು ಕಚೇರಿಗಳಲ್ಲಿ, ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಮತ್ತು ಪರಿಶೀಲನೆಗಾಗಿ ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರು ಪರಿಶೀಲಿಸಿಕೊಳ್ಳಬಹುದು. ಚುನಾವಣಾ ಆಯೋಗದ ವೆಬ್‌ಸೈಟ್ ಮತ್ತು ಕೊಡಗು ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲೂ ಮಾಹಿತಿ ಲಭ್ಯವಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 285 ಮತಗಟ್ಟೆಗಳಿದ್ದು 1,01,316 ಪುರುಷ ಮತ್ತು 1,07,797 ಮಹಿಳೆ ಇತರ ಎರಡು ಸೇರಿದಂತೆ 2,09,115 ಮತದಾರರು ಇದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 282 ಮತಗಟ್ಟೆಗಳಿದ್ದು 96,978 ಪುರುಷ, 99,708 ಮಹಿಳೆ ಹಾಗೂ 2ಇತರ ಮತರಾರನ್ನು ಒಳಗೊಂಡು 1,96,688 ಮತದಾರರಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 567 ಮತಗಟ್ಟೆಗಳಿದ್ದು, 1,98,294 ಪುರುಷ, 2,07,505 ಮಹಿಳೆ ಹಾಗೂ 4 ಇತರೆ ಸೇರಿ 4,05,803 ಮತದಾರರು ಇದ್ದಾರೆ.
ಮನೆ ಮನೆ ಭೇಟಿ ಸಮಯದಲ್ಲಿ ಮತದಾರರಿಂದ ಗಣತಿ ನಮೂನೆಗಳನ್ನು ಸಂಗ್ರಹಿಸಿ, ಡಿಜಿಟಲೀಕರಣ ಮಾಡಿ ಕರಡು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರ ಪೈಕಿ 58,893 ಮತದಾರರಿಗೆ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು ನೋಟೀಸ್ ನೀಡಿ ವಿಚಾರಣೆ ನಡೆಸಿ, ಬಿಎಲ್‌ಒಗಳಿಂದ ವರದಿ ಪಡೆದು ಮತ್ತು ದಾಖಲೆಗಳನ್ನು ಪರಿಶೀಲಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ 73 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 1,200ಕ್ಕಿಂತ ಹೆಚ್ಚು ಮತದಾರರು ಇದ್ದ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಒಟ್ಟು 15 ಮತಗಟ್ಟೆಗಳನ್ನು ವಿಭಜನೆ ಅಥವಾ ಪುನರ್ ವಿಂಗಡಣೆ ಮಾಡಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ಮತ್ತು ಮತಗಟ್ಟೆಗಳ ಬದಲಾವಣೆ ಬಗ್ಗೆ ಭಾರತ ಚುನಾವಣಾ ಆಯೋಗಕ್ಕೆ ಅನುಮೋದನೆ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಭಾರತ ಚುನಾವಣಾ ಆಯೋಗವು ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಮತಗಟ್ಟೆಗಳ ಸಂಖ್ಯೆ 552ರಿಂದ 567ಕ್ಕೆ ಏರಿದೆ ಎಂದು ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆರ್. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಇದ್ದರು. ಇದಕ್ಕೂ ಮೊದಲು ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026ರ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಸ್ತಾಂತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net