ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮೂಡಲಿ

ಕಥೆ ಬರೆಯುವ ಕಾರ್ಯಾಗಾರದಲ್ಲಿ ಗೋಪಾಲ ಪೆರಾಜೆ
ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮೂಡಲಿ
ಮೂರ್ನಾಡಿನ ಗೌಡ ಸಮಾಜದಲ್ಲಿ ಸೋಮವಾರ ನಡೆದ ಕಥೆ ಬರೆಯುವ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪುಸ್ತಕ ವಿತರಿಸಲಾಯಿತು. ಗೋಪಾಲ ಪೆರಾಜೆ, ಪಾಣತ್ತಲೆ ಹರೀಶ್, ತೆಕ್ಕಡೆ ಕುಮಾರಸ್ವಾಮಿ ಇತರರಿದ್ದರು.
Published on: 

ಮಡಿಕೇರಿ: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಪುನಃ ಅವರಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಗೋಪಾಲ ಪೆರಾಜೆ ನುಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮೂರ್ನಾಡು ಗೌಡ ಸಮಾಜ ಹಾಗೂ ಗೌಡ ಮಹಿಳಾ ಒಕ್ಕೂಟ ಇವರ ಸಹಯೋಗದಲ್ಲಿ ಮೂರ್ನಾಡಿನ ಗೌಡ ಸಮಾಜದಲ್ಲಿ ಸೋಮವಾರ ನಡೆದ ಕಥೆ ಬರೆಯುವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅರೆಭಾಷೆ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸುವುದು ಹಾಗೂ ಕಥೆ ಬರೆಯುವ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಕಾರ್ಯಾಗಾರವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್, ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬಳಕೆಯಿಂದ ಮಕ್ಕಳು ಹೊರಬರಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ. ಇದರಿಂದ ಸಾಹಿತ್ಯದಲ್ಲಿ ಬೆಳವಣಿಗೆ ಸಾಧ್ಯ ಎಂದರು.

ಕಥೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯರಾದ ತೆಕ್ಕಡೆ ಕುಮಾರಸ್ವಾಮಿ, ಕಥೆ ಎನ್ನುವುದು ಕೇವಲ ಕಲ್ಪನೆಯ ಅಭಿವ್ಯಕ್ತಿಯಲ್ಲ. ನಮ್ಮ ಸುತ್ತಮುತ್ತಲಿನ ಬದುಕು, ಸಂಬಂಧಗಳು, ಅನುಭವಗಳು, ಭಾವನೆಗಳು ಮತ್ತು ಸಮಾಜದ ವಿಚಾರಗಳನ್ನು ಸುಂದರವಾಗಿ ಕಟ್ಟಿಕೊಡುವ ಒಂದು ಶಕ್ತಿಯುತ ಮಾಧ್ಯಮ. ವಿಶೇಷವಾಗಿ ಮಕ್ಕಳಲ್ಲಿ ಓದುವ ಮತ್ತು ಬರೆಯುವ ಆಸಕ್ತಿಯನ್ನು ಬೆಳೆಸುವಲ್ಲಿ ಕಥೆಗಳಿಗೆ ಮಹತ್ವದ ಪಾತ್ರವಿದೆ ಎಂದ ಅವರು, ನಂತರ ಮಕ್ಕಳಿಗೆ ಕಥೆ ಬರೆಯುವುದರ ಬಗ್ಗೆ, ಕಥೆಗಳ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದರು.

ಅರೆಭಾಷೆ ಅಕಾಡೆಮಿ ಸದಸ್ಯರಾದ ವಿನೋದ್ ಮೂಡಗದ್ದೆ ಅವರು ಮಕ್ಕಳಿಗೆ ಕಥೆ ಬರೆಯುವುದರ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಕಥೆಗೆ ಉತ್ತಮವಾದ ವಿಷಯವನ್ನು ಹೇಗೆ ಆಯ್ಕೆ ಮಾಡಬೇಕು, ಕಥೆಯ ಆರಂಭ, ಬೆಳವಣಿಗೆ ಮತ್ತು ಅಂತ್ಯವನ್ನು ಹೇಗೆ ರೂಪಿಸಬೇಕು, ಪಾತ್ರಗಳನ್ನು ಹೇಗೆ ಸೃಷ್ಟಿಸಬೇಕು, ನಮ್ಮದೇ ಆದ ಅನುಭವಗಳನ್ನು ಕಥೆಯ ರೂಪಕ್ಕೆ ಹೇಗೆ ತರಬೇಕು ಎಂಬ ಹಲವು ವಿಷಯಗಳ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು.

ಇದೇ ಸಂದರ್ಭದಲ್ಲಿ ಅಕಾಡೆಮಿ ಸದಸ್ಯ ಸೂದನ ಈರಪ್ಪ, ಮೇರ್ಕಜೆ ಲೋಹಿತ್ ಸೋಮಯ್ಯ, ತೆಕ್ಕಡೆ ಪ್ರಸನ್ನ, ಮಹಿಳಾ ಒಕ್ಕೂಟದ ಆಡಳಿತ ಮಂಡಳಿ ಸದಸ್ಯೆಯರು ಹಾಜರಿದ್ದರು.

ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಲ್ಲುಮುಟ್ಲು ಜಶ್ಮಿ ಚಿಂತು ಸ್ವಾಗತಿಸಿದರೆ, ತೆಕ್ಕಡೆ ಆಶಾ ಪ್ರಸನ್ನ ವಂದಿಸಿದರು. ಮಹಿಳಾ ಒಕ್ಕೂಟದ ಸದಸ್ಯರು ಪ್ರಾರ್ಥಿಸಿದರೆ, ಕೊಂಪುಳಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ೧೬ ವರ್ಷದೊಳಗಿನ ಸುಮಾರು ೪೦ ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ಅರೆಭಾಷೆ ಅಕಾಡೆಮಿಯ ವತಿಯಿಂದ ಪ್ರಮಾಣಪತ್ರ ಮತ್ತು ಪುಸ್ತಕ ವಿತರಿಸಲಾಯಿತು.

ಕಥೆ ಎಂಬುದು ಕಲ್ಪನೆಯ ಪ್ರತಿಬಿಂಬ ಮಾತ್ರವಲ್ಲ, ಅದು ಬದುಕಿನ ಪ್ರತಿಫಲನ. ನಮ್ಮ ಸುತ್ತಲಿನ ಜನ, ನಂಟು, ನೋವು-ನಲಿವು, ಅನುಭವದ ಪಾಠ ಮತ್ತು ಸಮಾಜದ ಸ್ಥಿತಿಗತಿಗಳನ್ನು ಅರ್ಥಪೂರ್ಣವಾಗಿ ಹೆಣೆಯುವ ಪ್ರಬಲ ಸಾಧನವೇ ಕಥೆ. ಅದರಲ್ಲೂ ಎಳೆ ವಯಸ್ಸಿನ ಮಕ್ಕಳಲ್ಲಿ ಓದಿನ ಹವ್ಯಾಸ ಮತ್ತು ಬರವಣಿಗೆಯ ಕುತೂಹಲವನ್ನು ಚಿಗುರಿಸುವಲ್ಲಿ ಕಥೆಯ ಪಾತ್ರ ಅತ್ಯಂತ ಮಹತ್ವದ್ದು.

ತೆಕ್ಕಡೆ ಕುಮಾರಸ್ವಾಮಿ, ನಿವೃತ್ತ ಮುಖ್ಯೋಪಾಧ್ಯಾಯರು

ಅರೆಭಾಷೆ ಮತ್ತು ಅದರ ಸಾಹಿತ್ಯದ ಕುರಿತು ಮಕ್ಕಳಲ್ಲಿ ಒಲವು ಮೂಡಿಸುವ ಹಾಗೂ ಕಥೆ ರಚನೆಯ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಇಂದಿನ ಮಕ್ಕಳು ಸಾಹಿತ್ಯದಿಂದ ದೂರ ಸರಿಯುತ್ತಿದ್ದಾರೆ. ಅವರನ್ನು ಮತ್ತೆ ಸಾಹಿತ್ಯದತ್ತ ಸೆಳೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಗೋಪಾಲ ಪೆರಾಜೆ, ಸದಸ್ಯರು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ

ತಂತ್ರಜ್ಞಾನದ ಪ್ರಭಾವ ಹಾಗೂ ಮೊಬೈಲ್ ವ್ಯಸನದಿಂದ ಮಕ್ಕಳನ್ನು ಹೊರತರಲು ಇಂತಹ ಕಾರ್ಯಕ್ರಮಗಳ ಆಯೋಜನೆ ಅತ್ಯಂತ ಅಗತ್ಯ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಗುರು ಮೂಡಲು ಸಾಧ್ಯ.

ಪಾಣತ್ತಲೆ ಹರೀಶ್, ಅಧ್ಯಕ್ಷರು, ಗೌಡ ಸಮಾಜ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net