

ಇತ್ತೀಚೆಗೆ ಜಿಲ್ಲೆಗೆ ಬಹಳ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬಂದು ಸೇರುತ್ತಿರುವುದು ಕಂಡು ಬರುತ್ತಿದೆ. ವಾರದ ಸಂತೆ ದಿನಗಳಲ್ಲಿ ಯಥೇಚ್ಛವಾಗಿ ಕಂಡುಬರುವುದು ವಲಸಿಗರೇ. ಇದರಲ್ಲಿ ಅಸ್ಸಾಂ ಕಾರ್ಮಿಕರೊಂದಿಗೆ ಬಾಂಗ್ಲಾ ವಲಸಿಗರು ನುಸುಳುತ್ತಿದ್ದಾರೆ. ಸರ್ಕಾರ ಎಷ್ಟು ಕಟ್ಟೆಚ್ಚರ ವಹಿಸಿದರೂ ಸ್ಥಳೀಯರ ಸಹಕಾರದಿಂದಲೇ ಅವರು ಸರಾಗವಾಗಿ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಾರೆ. ಕಡಿಮೆ ದಿನಗೂಲಿಯಲ್ಲಿ ಕೆಲಸ ನಿರ್ವಹಣೆ ಸಾಧ್ಯವಾಗುವುದೆಂದು ವಲಸಿಗರಿಗೆ ಸುಳ್ಳು ಮಾರ್ಗದಲ್ಲಿ ನೆಲೆ ಮಾಡಿಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ಅವರಿಂದಲೇ ಜಿಲ್ಲೆಗೆ ಮಾರಕವಾಗುವುದು ಖಂಡಿತ.
— ಬೊಳ್ಳುಮಾನಿ ವಂಶಿ ದರ್ಶನ್, ಗೃಹಿಣಿ, ಬಲ್ಲಮಾವಟಿ
ಇದು ಕೇವಲ ಕೊಡಗಿನ ಸಮಸ್ಯೆ ಅಲ್ಲ, ರಾಷ್ಟ್ರೀಯ ಮಟ್ಟದ ನ್ಯೂನತೆ. ವೋಟ್ ಬ್ಯಾಂಕ್ ರಾಜಕಾರಣ, ರಾಷ್ಟ್ರೀಯತೆಯ ಕೊರತೆ, ಹಲವಾರು ಕಾರಣಗಳನ್ನು ಹುಡುಕಬಹುದು. ಬಾಂಗ್ಲಾ ಮೂಲದ ರೋಹಿಂಗ್ಯಾ ನುಸುಳುಕೋರರ ಹಾವಳಿ ಕೊಡಗಿಗೆ ಹೊಸತಲ್ಲ. ಈಗಾಗಲೇ ಜಡ ಕಳಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದಿತ್ತು. ಅದಾಗ್ಯೂ ಪರಿಹಾರದ ದೃಷ್ಟಿಯಲ್ಲಿ ಆಲೋಚಿಸಿದಾಗ ಭದ್ರತಾ ಸಿಬ್ಬಂದಿ, ಪೊಲೀಸರ, ಜನನಾಯಕರ, ಜವಾಬ್ದಾರಿ ಎಂದು ನಾವು ಕೂರುವಂತಿಲ್ಲ. ಕೊಡಗಿನ ಪ್ರತಿಯೊಬ್ಬ ಪ್ರಜೆಯೂ ಎಚ್ಛೆತ್ತು ಪೊಲಿಸರಿಗೆ ಅಸ್ಸಾಂ ಕಾರ್ಮಿಕರ ಮಾಹಿತಿ ಸಮಯನುಸಾರ ನೀಡುತ್ತಾ, ಬಾಂಗ್ಲಾ ದಾಖಲಾತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾ, ಆದಷ್ಟು ಅಸ್ಸಾಮಿಗಳ ಬದಲಾಗಿ ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ನೀಡುವುದು ಉತ್ತಮ.
— ಕೇಕಡ ಪೂಜಾ ನಾಗೇಂದ್ರ, ಕೊಟ್ಟೂರು ಗ್ರಾಮ
ಜಿಲ್ಲೆಯಲ್ಲಿ ಅಸ್ಸಾಂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಆಗುತ್ತಿದ್ದಾರೆ. ಬಾಂಗ್ಲಾ ನುಸುಳುಕೋರರೂ ಆಶ್ರಯ ಪಡೆದಿದ್ದಾರೆ. ಇವರುಗಳು ಜಿಲ್ಲೆಗೆ ಕಾರ್ಮಿಕರ ಸೋಗಿನಲ್ಲಿ ಬರುತ್ತಾರೆ. ಇವರುಗಳು ಬಂದಿರುವ ಬಗ್ಗೆ ಎಲ್ಲೂ ಸರಿಯಾದ ದಾಖಲೆಗಳು ಇಲ್ಲ. ಇವರುಗಳು ಜಿಲ್ಲೆಗೆ ಬರುವಾಗ ಇವರ ದಾಖಲೆ ಕಟ್ಟು ನಿಟ್ಟಿನ ಪರಿಶೀಲನೆ ಮಾಡುವ ಘಟಕ ತೆರೆಯಬೇಕು. ಕೊಡಗು ಗುಡ್ಡಗಾಡು ಪ್ರದೇಶ. ಇಲ್ಲಿ ಯಾರು ಬೇಕಾದರೂ ಆಶ್ರಯ ಪಡೆಯಬಹುದು. ಅಸ್ಸಾಂ ಕಾರ್ಮಿಕರು ಮೊದಮೊದಲು ಕೆಲವೆಡೆ ಮಾತ್ರ ಕಾಣಸಿಗುತ್ತಿದ್ದರು. ಆದರೆ ಇಂದು ಜಿಲ್ಲೆಯ ಮೂಲೆ ಮೂಲೆಯಲ್ಲೂ ಅಸ್ಸಾಂ ಕಾರ್ಮಿಕರು ಎಂದು ಹೇಳಿಕೊಂಡು ಸುತ್ತಾಟ ನಡೆಸುತ್ತಿದ್ದಾರೆ.
— ಚಾಮೆರ ಪ್ರದೀಪ್, ಉದ್ಯಮಿ, ಶನಿವಾರಸಂತೆ
ಜಿಲ್ಲೆಯಲ್ಲಿ ಹೊರರಾಜ್ಯಗಳಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಸಹಜ. ಆದರೆ ಅವರ ಸಂಪೂರ್ಣ ವಿವರಗಳನ್ನು ಸಂಬAಧಪಟ್ಟ ಇಲಾಖೆಗಳು ದಾಖಲಿಸಿಕೊಳ್ಳಬೇಕು. ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾದೇಶದ ನುಸುಳುಕೋರರು ಆಶ್ರಯ ಪಡೆದಿರುವ ಸಾಧ್ಯತೆಗಳಿದ್ದರೆ, ಪೊಲೀಸರು ಸಮಗ್ರ ಪರಿಶೀಲನೆ ನಡೆಸಬೇಕು. ಕಾನೂನು ಸುವ್ಯವಸ್ಥೆ ಹಾಗೂ ಜಿಲ್ಲೆಯ ಸುರಕ್ಷತೆಯ ದೃಷ್ಟಿಯಿಂದ ಅನುಮಾನಾಸ್ಪದ ವ್ಯಕ್ತಿಗಳ ಗುರುತು, ದಾಖಲೆ ಮತ್ತು ವಾಸಸ್ಥಳವನ್ನು ಪರಿಶೀಲಿಸುವುದು ಅಗತ್ಯ.
— ನಲ್ಲುಲ್ಲಿ ವಿಜಯ್, ಕವಿ, ಸೋಮವಾರಪೇಟೆ
ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಎಸ್ಟೇಟ್‌ಗಳಿಗೆ, ಹೋಟೆಲ್, ರೆಸ್ಟೋರೆಂಟ್‌ಗಳಿಗೆ ನೇಮಿಸಿಕೊಳ್ಳುವಾಗ ದಾಖಲಾತಿಗಳನ್ನು ಪಡೆದುಕೊಂಡು ಪೂರ್ವಾಪರ ಪರಿಶೀಲನೆ ನಡೆಸಿ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಹೊರ ರಾಜ್ಯದ ಕಾರ್ಮಿಕರ ಚಲನವಲನಗಳ ಮೇಲೆ ನಿಗಾವಹಿಸಬೇಕು. ಸಂಶಯಾಸ್ಪದ ಚಟುವಟಿಕೆಗಳು, ವ್ಯಕ್ತಿಗಳು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕೆ.ಎಸ್.ಪಿ. ತಂತ್ರಾAಶದ ಮೂಲಕ ಮಾಹಿತಿ ನೀಡಿ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಕೋರುತ್ತೇವೆ. ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗ ಪಡಿಸುವುದಿಲ್ಲ.
— ಆರ್.ಎನ್. ಬಿಂದುಮಣಿ, ಕೊಡಗು ಎಸ್.ಪಿ.