ಕಲ್ಯಾಣಕಾರಕ ದೈವ ಶ್ರೀ ಬಸವೇಶ್ವರ

ಸೋಮವಾರಪೇಟೆಯಲ್ಲಿದೆ ಐತಿಹಾಸಿಕ ಸನ್ನಿಧಿ
smpt
ಸೋಮವಾರಪೇಟೆಯ ಶ್ರೀ ಬಸವೇಶ್ವರ ದೇವಾಲಯದ ಹೊರ ನೋಟ. temple
Published on: 

ಕೃಷಿಕ ಸಮುದಾಯದ ಆರಾಧ್ಯ ದೈವ

ಹಿರಿಕರ ರವಿ, ಸೋಮವಾರಪೇಟೆ

ಪಟ್ಟಣದ ಐತಿಹಾಸಿಕ ಹಿನ್ನೆಲೆಯೊಂದಿಗೆ ಬೆಸೆದುಕೊಂಡಿರುವ ಬಸವೇಶ್ವರ ದೇವಾಲಯವು 150 ವರ್ಷಗಳ ಇತಿಹಾಸ ಹೊಂದಿದೆ. ಭಕ್ತರ ಪಾಲಿನ ಪ್ರಮುಖ ಶ್ರದ್ಧಾಕೇಂದ್ರವಾಗಿ ಗುರುತಿಸಿಕೊಂಡಿರುವುದು ವಿಶೇಷ. ಪಟ್ಟಣದ ಮೊದಲ ದೇವಾಲಯ ಎಂಬ ಪ್ರಸಿದ್ಧಿಯನ್ನೂ ಪಡೆದಿರುವ ಈ ಸನ್ನಿಧಿಯು ಧಾರ್ಮಿಕ ಆಚರಣೆಗಳೊಂದಿಗೆ ಗ್ರಾಮೀಣ ಜನಜೀವನ, ಸಂಪ್ರದಾಯ ಮತ್ತು ಕೃಷಿ ಸಂಸ್ಕೃತಿಯೊಂದಿಗೂ ಅವಿನಾಭಾವ ಸಂಬಂಧ ಹೊಂದಿದೆ.

ವೀರಶೈವ ಸಮಾಜದ ಆರಾಧನಾ ಕೇಂದ್ರವಾಗಿರುವ ದೇವಾಲಯದಲ್ಲಿ ಮದುವೆ, ಲಗ್ನಪತ್ರಿಕೆ, ನಾಮಕರಣ ಸೇರಿದಂತೆ ಅನೇಕ ಶುಭಕಾರ್ಯಗಳು ನಡೆದಿವೆ. ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ಕಲ್ಯಾಣ ಮಂಟಪಗಳ ಸೌಲಭ್ಯ ಇಲ್ಲದಿದ್ದಾಗ, ಅನೇಕ ಕುಟುಂಬಗಳು ಇದೇ ದೇವಾಲಯದಲ್ಲಿ ವಿವಾಹ ಸಮಾರಂಭಗಳನ್ನು ನೆರವೇರಿಸುತ್ತಿದ್ದವು. ಹೀಗಾಗಿ ಹಲವು ತಲೆಮಾರುಗಳ ಕುಟುಂಬಗಳ ನೆನಪುಗಳು ಈ ದೇವಾಲಯದೊಂದಿಗೆ ಮಿಳಿತಗೊಂಡಿವೆ.

ವಿವಾಹ, ಸಂತಾನ ಭಾಗ್ಯಕ್ಕಾಗಿ ಹರಕೆ : ಶೀಘ್ರವಾಗಿ ಕಲ್ಯಾಣ ಆಗಬೇಕು ಎಂಬ ಬಯಕೆಯಿಂದ ದೇವಾಲಯದಲ್ಲಿ ಹರಕೆ ಹೊತ್ತು, ಇಷ್ಟಾರ್ಥ ಸಿದ್ಧಿಸಿದ ಬಳಿಕ ಇಲ್ಲಿಯೇ ಹಲವರು ವಿವಾಹವಾದ ಅನೇಕ ನಿದರ್ಶನಗಳಿವೆ. ಭಕ್ತರು ತಮ್ಮ ಕುಟುಂಬದ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ದೇವರ ಮೊರೆ ಹೋಗುತ್ತಾರೆ. ನಂಬಿಕೆ ಹಾಗೂ ಭಕ್ತಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

*

ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರ :

ಹಿರಿಯರು ಹೇಳುವ ಪ್ರಕಾರ, ಆರಂಭದಲ್ಲಿ ಮರದ ಬುಡದಲ್ಲಿ ಬಸವಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿತ್ತು. ವೀರಶೈವ ಸಮಾಜದ ಯಜಮಾನರಾಗಿದ್ದ ಪುಟ್ಟಪ್ಪ ಅವರು ದೇವಾಲಯದ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿದರು. ಹಾಗಾಗಿ ಸುಮಾರು 70 ವರ್ಷಗಳಿಂದ ಇಲ್ಲಿ ನಿತ್ಯ ಪೂಜಾ ಕಾರ್ಯಗಳು ಸಂಪನ್ನಗೊಳ್ಳುತ್ತಿವೆ. 30 ವರ್ಷಗಳಿಂದ ಗಣೇಶ ಚೌತಿ ಸಂದರ್ಭ ಗೌರಿ-ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯವೂ ಇದೆ. ಕಾಲಕ್ರಮೇಣ ದೇವಾಲಯವು ಭಕ್ತರ ಸಹಕಾರದೊಂದಿಗೆ ಅಭಿವೃದ್ಧಿ ಹೊಂದಿ, ಧಾರ್ಮಿಕ ಕಾರ್ಯಕ್ರಮಗಳ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ.

*

9 ದಿನಗಳ ನವರಾತ್ರಿ ಉತ್ಸವ

ಕಳೆದ 9 ವರ್ಷಗಳಿಂದ ದೇವಾಲಯದಲ್ಲಿ ನವರಾತ್ರಿ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. 9

ದಿನಗಳ ಕಾಲ ದುರ್ಗಾದೇವಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ. ದುರ್ಗಾದೇವಿಯು ಆಧ್ಯಾತ್ಮಿಕ, ಆದಿದೈವಿಕ ಹಾಗೂ ಆದಿಭೌತಿಕ ಶಕ್ತಿಗಳ ಸ್ವರೂಪವೆಂಬ ಧಾರ್ಮಿಕ ನಂಬಿಕೆ ಭಕ್ತರಲ್ಲಿದೆ.ದುರ್ಗಾದೇವಿಯ ಆರಾಧನೆಯಿಂದ ಏಳು ವಿಧದ ಮೃತ್ಯುಕಂಟಕಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯೂ ಇದೆ. ವಿವಾಹ ಹಾಗೂ ಸಂತಾನ ಭಾಗ್ಯಕ್ಕಾಗಿ ಹರಕೆ ಹೊತ್ತವರು ನವರಾತ್ರಿ ಸಂದರ್ಭದಲ್ಲಿ ದೇವಿಗೆ ಮಡಲಕ್ಕಿ ತುಂಬಿ ಭಕ್ತಿ ಸಮರ್ಪಿಸುತ್ತಾರೆ. ನವರಾತ್ರಿ ಉತ್ಸವವು ದೇವಾಲಯದ ಧಾರ್ಮಿಕ ಪರಂಪರೆಯನ್ನು ಮುಂದುವರಿಸುವುದರೊಂದಿಗೆ ಭಕ್ತರನ್ನು ಒಗ್ಗೂಡಿಸುವ ಸಂದರ್ಭವಾಗಿಯೂ ಮಹತ್ವ ಪಡೆದಿದೆ.

*

ಮಳೆ, ಉತ್ತಮ ಫಸಲಿಗಾಗಿ ಕೃಷಿಕರ ಪ್ರಾರ್ಥನೆ :ಸೋಮವಾರಪೇಟೆ ತಾಲೂಕಿನ ಕೃಷಿ ಚಟು ವಟಿಕೆಗಳೊಂದಿಗೂ ಬಸವೇಶ್ವರ ದೇವಾಲಯದ ಧಾರ್ಮಿಕ ಪರಂಪರೆ ಬೆಸೆದುಕೊಂಡಿದೆ. ಮುಂಗಾರು ಆರಂಭಕ್ಕೂ ಮೊದಲು ಮಾದೇಶ್ವರ ಪರವು ಹಾಗೂ ಮೂಲ ಕಟ್ಟೆಬಸವೇಶ್ವರ ದೇವಾಲಯದಲ್ಲಿ ಎಡೆ ಹಬ್ಬ ಆಚರಿಸಿ, ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದೆ. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಒಂದೆರಡು ದಿನಗಳಲ್ಲಿ ಮಳೆಯಾದ ನಿದರ್ಶನಗಳಿವೆ ಎಂದು ಹಿರಿಯರು ಸ್ಮರಿಸುತ್ತಾರೆ. ಕಾಲಕ್ಕೆ ಸರಿಯಾಗಿ ಮಳೆಯಾಗಿ ಉತ್ತಮ ಕೃಷಿ ಫಸಲು ಕೈ ಸೇರುವುದು ದೇವರ ಅಗೋಚರ ಶಕ್ತಿಯ ಫಲ ಎಂಬ ನಂಬಿಕೆ ಕೃಷಿಕರಲ್ಲಿದೆ.

14ಎಸ್‌ಪಿಟಿ4- ಶ್ರೀ ಬಸವೇಶ್ವರರ ವಿಗ್ರಹ.

14ಎಸ್‌ಪಿಟಿ5- ಬಲಮುರಿ ಗಣಪತಿ

14ಎಸ್‌ಪಿಟಿ6- ನವಗ್ರಹಗಳು.

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net