

ವಿರಾಜಪೇಟೆ : ಇಲ್ಲಿನ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕೊಡಗು ದಂತ ಮಹಾವಿದ್ಯಾಲಯದ ಸಹಯೋಗದೊಂದಿಗೆ ಇತ್ತೀಚೆಗೆ ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಉಪನ್ಯಾಸಕ ವರ್ಗದವರಿಗೆ ದಂತ ಉಚಿತ ತಪಾಸಣೆ ಹಾಗೂ ಹಲ್ಲಿನ ಸಂರಕ್ಷಣಾ ಕ್ರಮದ ಬಗ್ಗೆ ಅರಿವು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕೊಡಗು ದಂತ ಮಹಾ ವಿದ್ಯಾಲಯದ ಉಪ ಪ್ರಾಂಶುಪಾಲ ಹಾಗೂ ಘಟಕದ ಮುಖ್ಯಸ್ಥ ಡಾ.ಜಿತೇಶ್ ಮಾತನಾಡಿ, ಬಾಲ್ಯದಲ್ಲಿ ಹಾಲು ಹಲ್ಲಿನಿಂದ ಹಿಡಿದು ನಂತರ ಮನುಷ್ಯರಲ್ಲಿ ಹಲ್ಲಿನ ಬೆಳವಣಿಗೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸಿದರು. ದಿನಕ್ಕೆ ಎರಡು ಬಾರಿ ಹಲ್ಲುಗಳನ್ನು ಶುಚಿ ಗೊಳಿಸಬೇಕು. ತಂಬಾಕು ಹಾಗೂ ತಂಬಾಕಿನ ಇತರ ಉತ್ಪನ್ನಗಳನ್ನು ಬಳಸಿ ಹಲ್ಲು ಹಾಗೂ ಬಾಯಿಯ ಆರೋಗ್ಯ ಕೆಡೆಸಿ ಕೊಂಡರೆ ಬಾಯಿ ಕ್ಯಾನ್ಸರ್ ಬರುತ್ತದೆ ಎಂದು ಡಾ.ಜಿತೇಶ್ ಎಚ್ಚರಿಸಿದರು. ದಂತ ವೈದ್ಯಕೀಯ ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು. ಅವರಲ್ಲಿ ಉತ್ಸಾಹ ಮೂಡಿಸಬೇಕು. ಸೀಳುತುಟಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಮ್ಮ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಕೆ.ಜೆ. ಮಿನಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಕಲಿಕೆಗೆ ಹೆಚ್ಚಿನ ಶ್ರದ್ಧೆ ಮತ್ತು ಸಮಯ ನೀಡಬೇಕು ಎಂದರು.
ಯಾವುದೇ ಶಿಬಿರ, ಕಾರ್ಯಾಗಾರಗಳು ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ವರದಾನವಾಗುತ್ತವೆ. ಅಧ್ಯಯನದಲ್ಲಿ ಮುಂದಿನ ಹಂತಕ್ಕೆ ಸಾಗಲು ಪ್ರೇರಣೆ ನೀಡುವುದರೊಂದಿಗೆ ಚಿಕಿತ್ಸಾ ವಿಧಾನದ ಅರಿವು ಮೂಡಿಸಲಿವೆ ಎಂದರು. ನಂತರ ನುರಿತ ವೈದ್ಯರು ಹಲ್ಲಿನ ತಪಾಸಣೆ ನಡೆಸಿದರು. ಪ್ರಶಿಕ್ಷಣಾರ್ಥಿಗಳು ಹಾಗೂ ಉಪನ್ಯಾಸಕರು ಹಾಜರಿದ್ದರು.