ಕಲಾಸಂಭ್ರಮ ವೇದಿಕೆಯಲ್ಲಿ ನೃತ್ಯ ವೈಭವ

ಕಲಾಸಂಭ್ರಮ ವೇದಿಕೆಯಲ್ಲಿ ನೃತ್ಯ ವೈಭವ
ದಸರಾ ಹಿನ್ನೆಲೆಯಲ್ಲಿ ಮಡಿಕೇರಿಯ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿದವು.
Published on: 

 ಮಡಿಕೇರಿ

ಮಡಿಕೇರಿ ದಸರಾ ಜನೋತ್ಸವ ಹಿನ್ನೆಲೆಯಲ್ಲಿ ಇಲ್ಲಿನ ಗಾಂಧಿ ಮೈದಾನದ ಕಲಾಸಂಭ್ರಮ

 ವೇದಿಕೆಯಲ್ಲಿ ಗುರುವಾರ ಸಂಜೆ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ವಿವಿಧ ಕಲಾತಂಡಗಳ ನೃತ್ಯ, ಮ್ಯಾಜಿಕ್ ಹಾಗೂ ಕಲಾ ಪ್ರದರ್ಶನಗಳು ಪ್ರೇಕ್ಷಕರಿಂದ  ಸತತ ಚಪ್ಪಾಳೆ ಗಿಟ್ಟಿಸಿಕೊಂಡವು.

 ಮೈಸೂರಿನ ಸಿಗ್ನೇಚರ್ ಡ್ಯಾನ್ಸ್ ಕಂಪೆನಿಯ ಕಲಾವಿದರು ನೀಡಿದ ರೋಮಾಂಚಕ ನೃತ್ಯ ವೈವಿಧ್ಯದೊಂದಿಗೆ ಕಾರ್ಯಕ್ರಮ ಕಳೆಗಟ್ಟಿತು. ತದನಂತರ ಮಡಿಕೇರಿಯ ಪ್ರಸಿದ್ಧ ಜಾದುಗಾರ ವಿಕ್ರಮ್  ನಡೆಸಿಕೊಟ್ಟ ಮ್ಯಾಜಿಕ್ ಶೋ, ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಎಲ್ಲರನ್ನೂ ವಿಸ್ಮಯ ಲೋಕಕ್ಕೆ ಕರೆದೊಯ್ದು ಮನರಂಜಿಸಿತು. ಕಾರ್ಯಕ್ರಮದಲ್ಲಿ ಮೂರ್ನಾಡಿನ ಸ್ಟೆಪ್ ಅಪ್ ಅಕಾಡೆಮಿ ಹಾಗೂ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡಗಳು ನಡೆಸಿಕೊಟ್ಟ ನೃತ್ಯ ವೈಭವ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸುಳ್ಯದ ಫ್ಯೂಷನ್ ಇನ್‌ಸ್ಟಿಟ್ಯೂಟ್ ನೀಡಿದ ಸಾಂಸ್ಕೃತಿಕ ವೈಭವವು ಕರಾವಳಿ ಮತ್ತು ಮಲೆನಾಡಿನ ಕಲಾ ಸಂಸ್ಕೃತಿಯನ್ನು ಆಕರ್ಷಕವಾಗಿ ಬಿಂಬಿಸಿತು.

ಅಲ್ಲದೆ, ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ಕಲಾವಿದರ ವೈವಿಧ್ಯಮಯ ನೃತ್ಯ ರೂಪಕಗಳು ಹಾಗೂ ನಟರಾಜ ನೃತ್ಯನಿಕೇತನದ ವಿದ್ಯಾರ್ಥಿಗಳಿಂದ ಮೂಡಿಬಂದ ಶಾಸ್ತ್ರೀಯ ನೃತ್ಯ ಪ್ರದರ್ಶನವು ಪ್ರೇಕ್ಷಕರಲ್ಲಿ ಭಕ್ತಿ ಮತ್ತು ರಸಭಾವಗಳನ್ನು ಉಕ್ಕಿಸಿತು.

ಈ ಪ್ರಮುಖ ಕಾರ್ಯಕ್ರಮಗಳ ಜೊತೆಗೆ ವಿವಿಧ ಸ್ಥಳೀಯ ಕಲಾವಿದರಿಂದ ಮೂಡಿಬಂದ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗುರುವಾರದ ಸಂಜೆಯನ್ನು ಅತ್ಯಂತ ವರ್ಣರಂಜಿತ ಹಾಗೂ ಸ್ಮರಣೀಯವಾಗಿಸಿದವು. ಸ‌ಂಜೆಯ ವೇಳೆ ಮಡಿಕೇರಿಯಲ್ಲಿ ಸುರಿದ ತುಂತುರು ಮಳೆ ಸಾಂಸ್ಕೃತಿಕ ಕಾರ್ಯಕ್ರಮದ ಸಂಭ್ರಮಕ್ಕೆ‌ ತುಸು ತಣ್ಣೀರೆರಿಚಿದಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net