ಖಾಕಿ ಭದ್ರತೆಯಲ್ಲಿ ಹೆದ್ದಾರಿ ಕಾಮಗಾರಿ

Kavital police protection for road work
ಭೂಮಿ ನೀಡಿದವರಿಗೆ ಪರಿಹಾರ ಮೊತ್ತ ಪಾವತಿಸ ಬೇಕೆಂದು ಗೋನವಾರದಲ್ಲಿ ಭಾರತ್ ಮಾಲಾ ರಸ್ತೆ ಕಾಮಗಾರಿಗೆ ಅಡ್ಡಿಪಡಿಸಲು ಮುಂದಾದ ರೈತರನ್ನು ತಡೆದ ಪೊಲೀಸರು.
Published on

ಕವಿತಾಳ: ಸಮೀಪದ ಗೋನವಾರದಲ್ಲಿ ರೈತರ ವಿರೋಧದ ನಡುವೆಯೇ ಪೊಲೀಸ್ ಬಂದೋಬಸ್ತ್‌ನಲ್ಲಿ ಗುರುವಾರ ಭಾರತ್ ಮಾಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಲಾಯಿತು.

ಇನ್ನೊಂದು ವಾರದಲ್ಲಿ ರೈತರ ಖಾತೆಗೆ ಭೂಸ್ವಾಧೀನದ ಪರಿಹಾರ ಮೊತ್ತ ಹಾಕಲಾಗುವುದೆಂದು ಅಧಿಕಾರಿಗಳು ರೈತರಿಗೆ ತಿಳಿಸಿದ್ದರು. ಹೀಗಾಗಿ ಗೋನವಾರದಲ್ಲಿ ಭಾರತ್ ಮಾಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಗುತ್ತಿಗೆದಾರರು ಜೆಸಿಬಿ ಸೇರಿ ಇತರ ಯಂತ್ರಗಳೊಂದಿಗೆ ಆಗಮಿಸಿದ್ದರು. ಇನ್ನೇನು ಕೆಲಸ ಶುರು ಮಾಡುವಷ್ಟರಲ್ಲಿ ಮಸ್ಕಿ ತಾಲೂಕಿನ ವಟಗಲ್, ಆನಂದಗಲ್, ಅಮರಾವತಿ ಹೆಸರೂರು ರೈತರು ಬಂದು, ನಮ್ಮ ಭೂಮಿಗೆ ಪರಿಹಾರ ಮೊತ್ತ ಪಾವತಿಸಬೇಕು. ಮೊದಲು ಹಣ ನೀಡಬೇಕು. ಅಲ್ಲಿಯವರೆಗೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಲಿಂಗಸುಗೂರು ಎಸಿ ಬಸವಣೆಪ್ಪ ಕಲಶೆಟ್ಟಿ ಮಾತನಾಡಿ, ವಾರದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿಸುವ ಪ್ರಯತ್ನ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿ ತಡೆಯಬಾರದು ಎಂದರು. ಆದರೆ, ಇದಕ್ಕೆ ಒಪ್ಪದ ರೈತರು, ನಮಗೆ ಈವರೆಗೆ ನಯಾ ಪೈಸೆ ಹಣ ಬಂದಿಲ್ಲ. ನಿಮ್ಮ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಕಾಮಗಾರಿ ಸ್ಥಳದಲ್ಲಿ ಧರಣಿ ಕುಳಿತರು. ಬಳಿಕ ತಹಸೀಲ್ದಾರ್ ಮಲ್ಲಪ್ಪ ಯರಗೋಳ ಅವರು ರೈತರೊಂದಿಗೆ ಸಭೆ ನಡೆಸಿದರು. ಸ್ಥಳಕ್ಕೆ ವಕೀಲರೊಬ್ಬರನ್ನು ಕರೆಸಿ ವಾರದೊಳಗೆ ಹಣ ಹಾಕಿಸಲಾಗುವುದು ಎಂದು ಹೇಳಿದರೂ ರೈತರು ಒಪ್ಪಲಿಲ್ಲ. ಹೀಗಾಗಿ ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ರೈತರನ್ನು ಚದುರಿಸಿ ರಸ್ತೆ ಕಾಮಗಾರಿ ಶುರು ಮಾಡಲಾಯಿತು. ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ರೈತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಡಿಎಸ್ಪಿ ದತ್ತಾತ್ರೇಯ ಕರ್ನಾಡ್, ಪಿಎಸ್‌ಐ ವೆಂಕಟೇಶ ಮುದಗಲ್, ವಿಶೇಷ ಭೂಸ್ವಾಧೀನ ಅಧಿಕಾರಿ ಗುರುಸಿದ್ದಪ್ಪ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಭೀಮರಾವ್ ಇದ್ದರು. ರೈತ ಮುಖಂಡರಾದ ಸಿದ್ದಲಿಂಗಪ್ಪ ಸಾಹುಕಾರ, ಬಸವರಾಜ ಸಾಹುಕಾರ, ವೀರಭದ್ರಪ್ಪ, ಬಾಲಾಜಿ, ಚಂದ್ರಶೇಖರ ಸಾಹುಕಾರ, ಗುಂಡಪ್ಪ, ಅಮರಪ್ಪ, ಯಮನೂರು, ಯಂಕಣ್ಣಸ್ವಾಮಿ, ಲಿಂಗರಾಜ, ತಿಮ್ಮಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net