ಕೋಡಿ ಕನ್ಯಾಣದಲ್ಲಿ ನಾಮಪತ್ರ ವಾಪಸ್

kodi
Published on

ಕೋಟ: ಹಕ್ಕುಪತ್ರ ಹಾಗೂ ಜಟ್ಟಿ ನಿರ್ಮಾಣ ವಿಳಂಬ ವಿರೋಧಿಸಿ ಕೋಡಿ ಕನ್ಯಾಣ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿರುವ ಮಧ್ಯೆ ಕೋಡಿ ಬೇಂಗ್ರೆಯಿಂದ ಮೂವರು ಅಭ್ಯರ್ಥಿಗಳು ಸೋಮವಾರ ನಾಮಪತ್ರಗಳನ್ನು ಹಿಂಪಡೆದು ಹೋರಾಟ ಬೆಂಬಲಿಸಿದ್ದಾರೆ.

ಕೋಡಿ ಗ್ರಾಮ ಪಂಚಾಯಿತಿ ಒಟ್ಟು 12 ಸ್ಥಾನಗಳ ಪೈಕಿ ಬೇಂಗ್ರೆ ವಾರ್ಡ್‌ನ ನಾಲ್ಕು ಸ್ಥಾನಗಳ ಪೈಕಿ ಮೂರಕ್ಕೆ ನಾಮಪತ್ರ ಸಲ್ಲಿಕೆಯಾಗಿತ್ತು. ಆದರೆ ನಿರ್ಣಯದ ವಿರುದ್ಧವಾಗಿ ನಾಮಪತ್ರ ಸಲ್ಲಿಸಿರುವುದು ಗ್ರಾಮಸ್ಥರ ಟೀಕೆಗೆ ಗುರಿಯಾಗಿತ್ತು. ಈ ಬೆಳವಣಿಗೆ ಬಳಿಕ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿರುವ ಸೋಮವಾರ ಮೂವರೂ ನಾಮಪತ್ರ ಹಿಂಪಡೆದಿದ್ದಾರೆ.

ಗ್ರಾಮಸ್ಥರ ಸಭೆ: ಕೋಡಿ ಕನ್ಯಾಣ ಗ್ರಾಮದ ಹಕ್ಕುಪತ್ರ ಹಾಗೂ ಜಟ್ಟಿ ನಿರ್ಮಾಣದ ವಿಳಂಬ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚುನಾವಣೆ ಬಹಿಷ್ಕರಿಸಿದ್ದು, ಮುಂದಿನ ತೀರ್ಮಾನದ ಕುರಿತು ಕೋಡಿ ಹೊಸ ಬೇಂಗ್ರೆ ಲೈಟ್‌ಹೌಸ್ ಬಳಿ ಸೋಮವಾರ ಸಭೆ ನಡೆಸಲಾಯಿತು.

ಮುಂದಿನ ತೀರ್ಮಾನದ ಕುರಿತಾಗಿ ಗ್ರಾಮದ ಹಿರಿಯ ಮುಖಂಡರಾದ ಲಕ್ಷ್ಮಣ್ ಬಂಗೇರ ಇತರ ಮುಖಂಡರ ನೇತೃತ್ವದಲ್ಲಿ ಕೆಲವು ತೀರ್ಮಾನ ಕೈಗೊಳ್ಳಲಾಯಿತು.

ಗ್ರಾಮದ ಸಮಸ್ಯೆ ಮನಗಂಡು ಗ್ರಾಮಸ್ಥರ ನಿರ್ಧಾರ ಬೆಂಬಲಿಸಿದ ಆಕಾಂಕ್ಷಿಗಳಿಗೆ ಹಾಗೂ ಪಕ್ಷಗಳ ಮುಖಂಡರಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ಮುಂದಿನ ಚುನಾವಣಾ ಫಲಿತಾಂಶ ಬಂದ ನಂತರ ತೀರ್ಮಾನ ಸೇರಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಚುನಾವಣಾ ಅಧಿಕಾರಿಗಳ ಮೂಲಕ ತಮ್ಮೂರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net