

ಭಟ್ಕಳ: ಕನ್ನಡ ಪ್ರೇಮ ಎನ್ನುವುದು ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯ ನಿರಂತರವಾಗಿರಬೇಕು. ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕನ್ನಡ ನಾಡು, ನುಡಿಯನ್ನು ಗೌರವಿಸಬೇಕು ಎಂದು ಮುರ್ಡೆಶ್ವರದ ಸಾಹಿತಿ ಶಂಭು ನಾರಾಯಣ ಹೆಗಡೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಳಿಕ ತಮ್ಮ ಸ್ವರಚಿತ ಚುಟುಕುಗಳ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯ ಮಹತ್ವ ತಿಳಿಸಿದರು.
ಸಿನಿಮಾ ನಿರ್ದೇಶಕ ಹಾಗೂ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಕನ್ನಡ ಪ್ರಾಧ್ಯಾಪಕ ಸತೀಶ ಎಂ. ಮಾತನಾಡಿ, ಕನ್ನಡ ನುಡಿಯ ಸೊಗಸು ಹಾಗೂ ಇಂದು ಭಾಷೆ ಎದುರಿಸುತ್ತಿರುವ ಸವಾಲುಗಳ ಕುರಿತು ತಿಳಿಸಿದರು.
ಕಾಲೇಜ್ ಪ್ರಾಂಶುಪಾಲ ನಾಗೇಶ ಶೆಟ್ಟಿಯವರ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸಂಯೋಜಕ ಸುರೇಶ ಮೆಟಗಾರ, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಯೋಜಕ ಅಣ್ಣಪ್ಪ ನಾಯ್ಕ, ಇತರರು ಉಪಸ್ಥಿತರಿದ್ದರು. 5ನೇ ಸೆಮಿಸ್ಟರ್ ವಿದ್ಯಾರ್ಥಿನಿಯರಾದ ವಿಜೇತ ನಾಯ್ಕ, ಯೋಗಿನಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.