

ಕಂಪ್ಲಿ: ಬಡಜನತೆಗೆ ಸೂರು ಒದಗಿಸುವುದು ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾಗಿದ್ದು, ವಿಧಾನಸೌಧದ ಪ್ರತಿ ಕಚೇರಿಗೂ ತಿರುಗಿ 500 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ 4ನೇವಾರ್ಡ್‌ನಲ್ಲಿ ಮಂಗಳವಾರ 2021-22ನೇಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯ 34.25 ಕೋಟಿ ರೂ. ವೆಚ್ಚದಲ್ಲಿ ಸ್ಲಂಬೋರ್ಡ್‌ನಿಂದ ನಾನಾ ವಾರ್ಡ್‌ಗಳಲ್ಲಿನ ಕೊಳಚೆ ಪ್ರದೇಶಗಳ 500 ಮನೆಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದಲ್ಲಿ 900 ಮನೆಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯ 500 ಮನೆ ಮಂಜೂರಾಗಿವೆ. ಎಸ್ಸಿ,ಎಸ್ಟಿ ಫಲಾನುಭವಿಗಳು 68 ಸಾವಿರ ರೂ., ಇತರ ವರ್ಗದವರು 1.05 ಲಕ್ಷ ರೂ. ಪಾವತಿಸಬೇಕು. 6.85 ಲಕ್ಷ ರೂ. ವೆಚ್ಚದಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದರು.
ಫಲಾನುಭವಿಗಳ ಆದಾಯದ ಮಿತಿಯನ್ನು 60 ಸಾವಿರ ರೂ.ನಿಂದ 20 ಸಾವಿರ ರೂ.ಗೆ ಇಳಿಕೆ ಮಾಡಬೇಕು. ವಯೋಮಿತಿಯನ್ನು 50 ವರ್ಷಗಳಿಗೆ ಏರಿಸುವಂತೆ, ದಾಖಲೆಗಳನ್ನು ಸರಳೀಕೃತಗೊಳಿಸಿ ಬ್ಯಾಂಕ್ ಕೂಡಲೇ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು. ಉಳಿದ 400 ಮನೆಗಳ ಮಂಜೂರಾತಿಗಾಗಿ ಸದನದಲ್ಲಿ ಒತ್ತಾಯಿಸುತ್ತೇನೆ ಎಂದರು. 500 ಮನೆಗಳ ನಾನಾ ವಾರ್ಡ್‌ಗಳ ಫಲಾನುಭವಿಗಳು ಇದ್ದರು.
ರಾಜಕೀಯ ನಿವೃತ್ತಿ ಹೊಂದುವೆ
ಕಂಪ್ಲಿ ಸಕ್ಕರೆ ಕಾರ್ಖಾನೆಯ ಭೂಮಿ ಯಾವುದೇ ಕಾರಣಕ್ಕೂ ಖಾಸಗಿ ಪರಬಾರೆಗೆ ಬಿಡುವುದಿಲ್ಲ. ವ್ಯಾಜ್ಯ ಕೋರ್ಟ್‌ನಲ್ಲಿದೆ. ಹಿಂದಿನ ದಿನಾಂಕಕ್ಕೆ ಮುಟೇಷನ್ ಮಾಡುವಂತೆ ಪುರಸಭೆ ಸಿಒರನ್ನು ಒತ್ತಾಯಿಸಲಾಗುತ್ತಿದೆ. 2023ಕ್ಕೆ ಕಾಂಗ್ರೆಸ್ ಆಡಳಿತಕ್ಕೆ ಬರಲಿದ್ದು, ಸಕ್ಕರೆ ಕಾರ್ಖಾನೆಯ 176ಎಕರೆ ಭೂಮಿ ಮರುವಶಪಡಿಸಿಕೊಳ್ಳಲಾಗುವುದು. ಸಕ್ಕರೆ ಕಾರ್ಖಾನೆಯ 176 ಎಕರೆ ಕಂಪ್ಲಿ ಜನತೆಯ ಆಸ್ತಿಯಾಗಿದ್ದು, ಲೂಟಿ ಮಾಡಲು ಬಿಡುವುದಿಲ್ಲ. ಸಾಧ್ಯವಾಗದಿದ್ದಲ್ಲಿ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದರು.
ಫೆ.4ರಿಂದ ಅಧಿವೇಶನ ಆರಂಭಗೊಳ್ಳಲಿದ್ದು, ಶಿವರಾತ್ರಿ ಶ್ರೇಷ್ಠವಾಗಿದ್ದರಿಂದ 500 ಮನೆಗಳ ಭೂಮಿಪೂಜೆ ನೆರವೇರಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಇವೇ 500 ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮಾ.2ರಂದು ನೆರವೇರಿಸುವರು ಎಂಬ ವಿಷಯ ಗೊತ್ತಿಲ್ಲ. ಶಿಷ್ಟಾಚಾರದಂತೆ ಸ್ಥಳೀಯ ಶಾಸಕರನ್ನು ಆಹ್ವಾನಿಸಬೇಕು. ಸಚಿವರ ಭೂಮಿಪೂಜೆಗೆ 7 ದಿನ ಮುಂಚೆ ಶಾಸಕರಿಗೆ ನೋಟಿಸ್ ನೀಡಬೇಕು.| ಜೆ.ಎನ್.ಗಣೇಶ, ಕಂಪ್ಲಿ ಶಾಸಕ