11 ಗ್ರಾಪಂಗಳಲ್ಲಿ ಜೆಡಿಎಸ್ ಮೇಲುಗೈ

web 3
Published on

ಮೂಡಿಗೆರೆ: ಮೂಡಿಗೆರೆ ವಿಧಾನಸಭೆ ಕ್ಷೇತ್ರದ 5 ಹೋಬಳಿಯ 244 ಸ್ಥಾನಗಳಿಗೆ ನಡೆದ ಗ್ರಾಪಂ ಚುನಾವಣೆಯಲ್ಲಿ 95 ಜೆಡಿಎಸ್ ಬೆಂಬಲಿತರು ಗೆಲುವು ಪಡೆದು 11 ಗ್ರಾಪಂಗಳಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.

ಕ್ಷೇತ್ರದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಗ್ರಾಪಂಗಳಲ್ಲಿ ಜಾತ್ಯತೀತ ಪಕ್ಷದೊಂದಿಗೆ ಕೈಜೋಡಿಸಿ ಅಧಿಕಾರ ಹಿಡಿಯಲಾಗುವುದು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೊಷಣೆ ನಂತರ ಬಿಜೆಪಿ ಆಪರೇಷನ್ ಕಮಲ ನಡೆಸುವ ಭಯವಿದೆ. ಅದಕ್ಕೆ ತಕ್ಕ ಉತ್ತರ ನೀಡಲು ಜೆಡಿಎಸ್ ತಯಾರಾಗಿದೆ ಎಂದು ತಿಳಿಸಿದರು.

ನಾನು 1985ರಲ್ಲಿ ಪ್ರಥಮ ಬಾರಿಗೆ ಶಾಸಕನಾಗಿದ್ದಾಗ ಸಾರ್ವಜನಿಕರಿಂದ 80 ಸಾವಿರ ರೂ. ವಂತಿಗೆ ಸಂಗ್ರಹವಾಗಿತ್ತು. ಚುನಾವಣೆಯಲ್ಲಿ 68 ಸಾವಿರ ರೂ. ಖರ್ಚಾಗಿ, 12 ಸಾವಿರ ರೂ. ಉಳಿದಿತ್ತು. ಈಗ ವಿಧಾನಸಭಾ ಚುನಾವಣೆಗೆ 6ರಿಂದ 10 ಕೋಟಿ ರೂ. ಖರ್ಚಾಗುತ್ತಿದೆ. ಈಗ ಚುನಾವಣೆ ವೇಳೆ ಹಣ, ಹೆಂಡದ ಹೊಳೆ ಹರಿಸುವುದು ಕೆಲವು ಪಕ್ಷಗಳಿಗೆ ಸಾಮಾನ್ಯವಾಗಿದೆ. ಬಿಜೆಪಿ ಆಪರೇಷನ್ ಕಮಲ ಆರಂಭಿಸಿ ಶಾಸಕರ ಖರೀದಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಪಕ್ಷಾಂತರ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾದಾಗ ಮಾತ್ರ ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಸಾಧ್ಯ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್​ಕುಮಾರ್ ಮಾತನಾಡಿ, ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ 165, ಚಿಕ್ಕಮಗಳೂರು 80, ಕಡೂರು 170, ತರೀಕೆರೆ 86, ಎನ್.ಆರ್.ಪುರದ 35 ಸೇರಿ ಜಿಲ್ಲೆಯಲ್ಲಿ ಜೆಡಿಎಸ್ ಬೆಂಬಲಿತ 500 ಮಂದಿ ಗೆಲುವು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net