ಕಲಬುರಗಿ: ದೇಶದ ಲೋಕತಂತ್ರಕ್ಕೆ ಕಾಂಗ್ರೆಸ್​ನಿಂದ ಆಪತ್ತು: ರಾಜನಾಥ್​ಸಿಂಗ್ ಘರ್ಜನೆ

ಕಲಬುರಗಿಯಲ್ಲಿ ರಾಜನಾಥ್​ ಸಿಂಗ್​
ಕಲಬುರಗಿಯಲ್ಲಿ ರಾಜನಾಥ್​ ಸಿಂಗ್​
Published on: 

ಕಲಬುರಗಿ: ದೇಶದಲ್ಲಿ 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡು ಆಡಳಿತದ ಗದ್ದುಗೆ ಏರಲು ಅರಾಜಕತೆ ಸೃಷ್ಟಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದು, ದೇಶದ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್​ಸಿಂಗ್​ ಕಿಡಿಕಾರಿದರು.

ನಗರದಲ್ಲಿ ಭಾರತೀಯ ಜನತಾ ಪಕ್ಷದಿಂದ ಬುಧವಾರ ಏರ್ಪಡಿಸಿದ್ದ ಅರಾಜಕತೆ ಅಳಿಸಿ ಪ್ರಜಾಪ್ರಭುತ್ವ ಉಳಿಸಿ ಅಭಿಯಾನದ ಬೃಹತ್​ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿ, ಕಾಂಗ್ರೆಸ್​ ಚುನಾವಣೆ ಆಯೋಗ, ನ್ಯಾಯಾಲಯ ಸೇರಿ ಎಲ್ಲ ಸಂವಿಧಾನಿಕ ಸಂಸ್ಥೆಗಳ ಮೇಲೆ ಅಪನಂಬಿಕೆ ಸೃಷ್ಟಿಸುತ್ತಿದೆ. ಬೀದಿಯಲ್ಲಿ ದಂಗೆ ಎಬ್ಬಿಸಿದರೆ ಆಡಳಿತ ಬದಲಾಗಲ್ಲ. ಜನರ ಮನ ಗೆಲ್ಲಬೇಕು ಎಂದರು.

ಬೃಹತ್​ ಪಾದಯಾತ್ರೆ: ಅರಾಜಕತೆ ಅಳಿಸಿ, ಪ್ರಜಾಪ್ರಭುತ್ವ ಉಳಿಸಿ ಅಭಿಯಾನದ ಭಾಗವಾಗಿ ನಗರದ ಸೂಪರ್​ಮಾರ್ಕೆಟ್​ನಿಂದ ಅನ್ನಪೂರ್ಣ ವೃತ್ತದವರೆಗೆ ಸಹಸ್ರಾರು ಬಿಜೆಪಿ ಕಾರ್ಯಕರ್ತರ ಮಧ್ಯೆ ಬೃಹತ್​ ಪಾದಯಾತ್ರೆ ನಡೆಯಿತು. ಮೋದಿ ಕಹೀ ನಹೀ ಜಾಯೇಗಾ ಘೋಷಣೆ, ಹಾಡುಗಳೊಂದಿಗೆ ಜೈಕಾರದ ಜತೆ ಪಾದಯಾತ್ರೆ ನಡೆಸಲಾಯಿತು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ಸಿಂಗ್​, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಿ.ರಾಜೀವ್​, ಅರುಣ ಶಹಾಪುರ್​, ರಾಜುಗೌಡ ನಾಯಕ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್​, ಚಂದು ಪಾಟೀಲ್​, ಅಶೋಕ ಬಗಲಿ, ಉಮೇಶ ಜಾಧವ್​, ಶಶೀಲ ನಮೋಶಿ, ರಾಜಕುಮಾರ ಪಾಟೀಲ್​ ತೆಲ್ಕೂರ, ದತ್ತಾತ್ರೇಯ ಪಾಟೀಲ್​ ರೇವೂರ ಇತರರಿದ್ದರು.

ವಿದೇಶಿಗರ ಜತೆ ಕೂಡಿ ಕಾಂಗ್ರೆಸ್​ನಿಂದ ದೇಶಕ್ಕೆ ಅಪಮಾನ: ಕಾಂಗ್ರೆಸ್ಸಿಗರು ಇಟಲಿಯಿಂದ ನಾಯಕನನ್ನು ಕರೆಸಿ, ಹೈದರಾಬಾದ್​ನಲ್ಲಿ ಕಾರ್ಯಕ್ರಮ ಏರ್ಪಡಿಸಿ ಆತನಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೀಳು ಮಾತನಾಡಿಸಿದ್ದಾರೆ. ಕಾಂಗ್ರೆಸ್ಸಿಗರು ಚಪ್ಪಾಳೆ ತಟ್ಟಿದ್ದು, ನಾಚಿಕೆಗೇಡು. ಹಿಂದೆ ಪಾಕ್​ ಪ್ರಧಾನಿ ನವಾಜ್​ ಷರೀಪ್​ನು ಅಂದಿನ ಪ್ರಧಾನಿ ಮನಮೋಹನ್​ಸಿಂಗ್​ ಬಗ್ಗೆ ಟೀಕೆ ಮಾಡಿದಾಗ ಗುಜರಾತ್​ ಸಿಎಂ ಆಗಿದ್ದ ನರೇಂದ್ರ ಮೋದಿ ಸಿಂಗ್​ ಜತೆಗೆ ನಿಂತ್ತಿದ್ದರು. ಅಭಿಪ್ರಾಯ ಭೇದ ನಮಗೆ ಇರಬಹುದು. ವಿದೇಶಿಗರ ಹಸ್ತಕ್ಷೇಪ ಸಹಿಸಲ್ಲ ಎಂದು ರಾಜನಾಥ್​ಸಿಂಗ್​ ಹೇಳಿದರು.

ಅಧಿಕಾರಕ್ಕೆ ಏರಲು ಕಾಂಗ್ರೆಸ್​ ಕೀಳು ಮಟ್ಟಕ್ಕೆ ಇಳಿದಿದೆ. ಜನರಿಂದ ಆಯ್ಕೆಯಾದ 50 ಸರ್ಕಾರಗಳನ್ನು ಬೇಕಾಬಿಟ್ಟಿ ಕಿತ್ತೊಗೆದ ಇತಿಹಾಸ ಕಾಂಗ್ರೆಸ್​ಗಿದೆ. ಜನಪರ, ಸರ್ಕಾರದ ವಿರುದ್ಧ ಇದ್ದ 16 ನ್ಯಾಯಮೂರ್ತಿಗಳನ್ನು ಒಂದೇ ದಿನ ವರ್ಗ ಮಾಡಿದ್ದು, ಇದೀಗ ಸಂವಿಧಾನಿಕ ಸಂಸ್ಥೆಗಳ ಮೇಲೆ ಅಪನಂಬಿಕೆ ಹುಟ್ಟಿಸುತ್ತಿದ್ದಾರೆ. ದೇಶ ಬಲಿಷ್ಠ ಆರ್ಥಿಕ ಶಕ್ತಿಯಾಗುತ್ತಿದ್ದು, ಜನ ಕಾಂಗ್ರೆಸ್​ನ ಷಡ್ಯಂತ್ರ ಅರಿಯಬೇಕು.

> ರಾಜನಾಥ್​ಸಿಂಗ್​, ರಕ್ಷಣಾ ಸಚಿವ

ಮದುವೆ ಆಗದೆ ಹುಚ್ಚು ಬಿಡಲ್ಲ. ಹುಚ್ಚು ಬಿಡದೆ ಮದುವೆ ಆಗಲ್ಲ. ರಾಹುಲ್​ ಗಾಂಧಿಗೆ ಈ ಗಾದೆ ಮಾತು ಅನ್ವಯಿಸುತ್ತದೆ. ರಾಹುಲ್​ ಎನ್​ಆರ್​ಐ ಆಗಿದ್ದು, ವಿದೇಶದಲ್ಲಿ ಭಾರತಕ್ಕೆ ಅಪಮಾನ ಮಾಡಿ, ದಂಗೆಗೆ ಷಡ್ಯಂತ್ರ ರೂಪಿಸಿದ್ದು, ಭಾರತೀಯರ ಹೃದಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಮಲ್ಲಿಕಾರ್ಜುನ ರ್ಖಗೆಗೆ ದೇಶದ ಜನರೇ ಹೇಳುತ್ತಿದ್ದಾರೆ "ಮೋದಿ ಕಹಿ ನಹೀ ಜಾಯೇಗಾ.

> ಬಿ.ವೈ.ವಿಜಯೇಂದ್ರ, ರಾಜ್ಯಾಧ್ಯಕ್ಷ ಬಿಜೆಪಿ