ಸಮಾನತೆ ದಾರಿ ತೋರಿದ ಶರಣರು

ಶ್ರೀ 60ನೇ ವರ್ಧಂತಿ ಮಹೋತ್ಸವ
ಕಲಬುರಗಿ ಸುಲಫಲ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀಶೈಲ ಸಾರಂಗಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಪೀಠಾರೋಹಣದ 12ನೇ ವಾರ್ಷಿಕೋತ್ಸವ, 60ನೇ ವರ್ಧಂತಿ ಮಹೋತ್ಸವವನ್ನು ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಉದ್ಘಾಟಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿಡುಮಾಮಿಡಿ ಸ್ವಾಮೀಜಿ, ಶ್ರೀ ಡಾ.ಮುರುರಾಜೇಂದ್ರ ಸ್ವಾಮೀಜಿ, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ  ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ, ಶಿವಕಾಂತ ಮಹಾಜನ್​ ಇತರರಿದ್ದರು.
ಕಲಬುರಗಿ ಸುಲಫಲ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀಶೈಲ ಸಾರಂಗಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಪೀಠಾರೋಹಣದ 12ನೇ ವಾರ್ಷಿಕೋತ್ಸವ, 60ನೇ ವರ್ಧಂತಿ ಮಹೋತ್ಸವವನ್ನು ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಉದ್ಘಾಟಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿಡುಮಾಮಿಡಿ ಸ್ವಾಮೀಜಿ, ಶ್ರೀ ಡಾ.ಮುರುರಾಜೇಂದ್ರ ಸ್ವಾಮೀಜಿ, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ, ಶಿವಕಾಂತ ಮಹಾಜನ್​ ಇತರರಿದ್ದರು.
Published on: 

ಕಲಬುರಗಿ: ಹನ್ನೆರಡನೆಯ ಶತಮಾನದಲ್ಲಿ ಶರಣರು ಭಕ್ತಿ ಮತ್ತು ಸಾಮಾಜಿಕ ಸಮಾನತೆ ಹೊಸ ದಾರಿ ತೋರಿಸಿದರು. ಭಕ್ತ ಮತ್ತು ಭಗವಂತನ ಮಧ್ಯದ ಅಂತರ ಕಡಿಮೆ ಮಾಡಿ ಸ್ತ್ರೀ-ಪುರುಷ ಭೇದವಿಲ್ಲದೆ ಎಲ್ಲರೂ ಒಂದೇ ವೇದಿಕೆಯಲ್ಲಿ ಇರುವಂಥ ವ್ಯವಸ್ಥೆ ರೂಪಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ ಎಂದು ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಸುಲಫಲ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀಶೈಲ ಸಾರಂಗಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಪೀಠಾರೋಹಣದ 12ನೇ ವಾರ್ಷಿಕೋತ್ಸವ ಹಾಗೂ 60ನೇ ವರ್ಷದ ವರ್ಧಂತಿ ಮಹೋತ್ಸವದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಸಾರಂಗಧರ ಶ್ರೀಗಳು ಕ್ರಿಯಾಶೀಲತೆ ಮತ್ತು ಸಂಘಟನಾ ಶಕ್ತಿ ಮೂಲಕ ಸಾಮಾಜಿಕ ಹೋರಾಟಗಳಿಗೆ ಬೆಂಬಲ ನೀಡಿದ್ದಾರೆ. ಸ್ವಾಮೀಜಿ ಮನಸ್ಸು ಮಾಡಿದರೆ ಮಠದ ಮೂಲಕ ಸಮಾಜದಲ್ಲಿ ಎಂಥದ್ದಾದರೂ ಬದಲಾವಣೆ ತರಬಹುದು ಎಂಬುದಕ್ಕೆ ಸುಲಫಲ ಮಠ ಸಾಕ್ಷಿಯಾಗಿದೆ. ಗಂಭೀರ ವಿಚಾರಗಳನ್ನು ತಿಳಿಹಾಸ್ಯದ ಮೂಲಕ ಜನರಿಗೆ ತಲುಪಿಸುವ ಅವರ ಶೈಲಿ ವಿಶಿಷ್ಟವಾಗಿದೆ ಎಂದು ಕೊಂಡಾಡಿದರು.

ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸುಲಫಲ ಮಠ ಶಕ್ತಿ ಮತ್ತು ಸಾಮರಸ್ಯದ ಕೇಂದ್ರವಾಗಿದೆ. ಸಮಾಜವನ್ನು ಕಟ್ಟುವ ಮತ್ತು ಮುನ್ನಡೆಸುವ ಕೆಲವೇ ಮಠಾಧೀಶರಲ್ಲಿ ಸಾರಂಗಧರ ಶ್ರೀ ಒಬ್ಬರು. ಒಳಿತು-ಕೆಡುಕು ಮಧ್ಯೆ ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಸಂವಿಧಾನದ 371(ಜೆ) ವಿಧಿ ಹಾಗೂ ಮಲ್ಲಾಬಾದ ಏತ ನೀರಾವರಿ ಸೇರಿ ಹಲವು ಹೋರಾಟಗಳಿಗೆ ಧ್ವನಿಯಾಗಿದ್ದಾರೆ ಎಂದರು.

ಮಠದ ಚಟುವಟಿಕೆಗಳನ್ನು ಪೂಜೆ, ಪ್ರಸಾದ, ಆಶೀರ್ವಾದ ಮತ್ತು ದಾಸೋಹಕ್ಕೆ ಸೀಮಿತಗೊಳಿಸದೆ ಸಾಮಾಜಿಕ ಕ್ಷೇತ್ರಕ್ಕೂ ವಿಸ್ತರಿಸಿದ್ದಾರೆ. ಮಠಗಳು ಸೀಮಿತ ಚೌಕಟ್ಟಿನಿಂದ ಹೊರಬಂದು ಸೀಮೋಲ್ಲಂಘನ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಜಿಡಗಾ-ಮುಗುಳಖೋಡ ಶ್ರೀ ಡಾ.ಮುರುರಾಜೇಂದ್ರ ಸ್ವಾಮೀಜಿ ಮಾತನಾಡಿ, ವಿಭಿನ್ನವಾಗಿರುವ ಸುಲಫಲ ಮಠ ಕಲಬುರಗಿಗೆ ಮಾತ್ರ ಸೀಮಿತವಾಗದೆ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಜಿಡಗಾ&ಸುಲಫಲ ಮಠದ ನಂಟು ಏಳು ಜನ್ಮಕ್ಕೂ ಮುರಿಯದಷ್ಟು ಗಟ್ಟಿಯಾಗಿದೆ. ನಮ್ಮಿಬ್ಬರದು ದೇಹ ಎರಡು, ಆತ್ಮ ಒಂದೇ ಎಂದರು.

ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​ ಸ್ವಾಗತಿಸಿದರು. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಅಭಿನಂದನಾ ನುಡಿಗಳನ್ನಾಡಿದರು.

ನಾಲವಾರದ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು, ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮೀಜಿ, ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಆಲಮಟ್ಟಿಯ ರುದ್ರಮುನಿ ಶ್ರೀ, ಚಿಂಚನಳ್ಳಿ ಹಾಗೂ ಗುರುಮಠಕಲ್​ ಶ್ರೀಗಳು, ಎಂಎಲ್​ಸಿಗಳಾದ ಡಾ.ಬಿ.ಜಿ. ಪಾಟೀಲ್​, ತಿಪ್ಪಣ್ಣಪ್ಪ ಕಮಕನೂರ, ಶಶೀಲ್​ ನಮೋಶಿ, ಪ್ರಮುಖರಾದ ನೀಲಕಂಠ ಮೂಲಗೆ, ಶಿವಕಾಂತ ಮಹಾಜನ್​, ದೇವಯ್ಯ ಗುತ್ತೇದಾರ್​, ರಾಜು ಲೆಂಗಟಿ, ಡಾ.ಸಂಗ್ರಾಮ ಬಿರಾದಾರ, ಡಾ.ಅಲ್ಲಮಪ್ರಭು ದೇಶಮುಖ, ಅಭಿಷೇಕ ಪಾಟೀಲ್​ ಇತರರಿದ್ದರು. ಕುಕ್ಕುನೂರಿನ ಚನ್ನಮಲ್ಲ ಶ್ರೀ ನಿರೂಪಣೆ ಮಾಡಿದರು.

ಸಾರಂಗಧರ ಶ್ರೀಗಳಿಗೆ ಗೌರವ

12ನೇ ಪೀಠಾರೋಹಣ ವಾರ್ಷಿಕೋತ್ಸವ ಮತ್ತು 60ನೇ ವರ್ಷದ ವರ್ಧಂತಿ ಮಹೋತ್ಸವ ನಿಮಿತ್ತ ಶ್ರೀಶೈಲ ಸಾರಂಗಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಗಳಿಗೆ ರುದ್ರಾಕ್ಷಿ ಕಿರೀಟ ಧಾರಣೆ ಮಾಡಿ ಪುಷ್ಪಾರ್ಚನೆ ಮೂಲಕ ಗೌರವಿಸಲಾಯಿತು. ಶರಣಬಸವೇಶ್ವರ ಸಂಸ್ಥಾನ, ಜಿಡಗಾ ಮಠ, ನಿಡುಮಾಮಿಡಿ ಸೇರಿ ವಿವಿಧ ಮಠಾಧೀಶರು ಗೌರವ ಸಮರ್ಪಿಸಿದರು.

ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವಂಥ ಕಾರ್ಯವನ್ನು ಮಠ-ಮಾನ್ಯಗಳು ಮಾಡುತ್ತಿವೆ. ಮಠಾಧೀಶರು, ಗುರುಗಳು ಜನರಲ್ಲಿನ ಅಂಧಕಾರ ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಶರಣ ಪರಂಪರೆಯಿಂದ ಜಗತ್ತಿನ ಆತ್ಮೋನ್ನತಿಯಾಗಬೇಕು. ಇಂತಹ ಅರಿವಿನ ಕಾರ್ಯಕ್ರಮಗಳನ್ನು ಎಲ್ಲ ಶರಣರು ನಡೆಸಬೇಕು.
> ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ
ಸುಲಫಲ ಮಠ ಕಲಬುರಗಿಯ ವಿಶಿಷ್ಟ ಮತ್ತು ಭಿನ್ನ ಮಠವಾಗಿದೆ. ಕಲಬುರಗಿಯಿಂದ ಶ್ರೀಶೈಲವರೆಗೆ ಮಠದ ಕೀರ್ತಿ ಹರಡಿದೆ. ಕಲಬುರಗಿಯ ಕಳಸ ಸುಲಫಲ ಮಠ ನಾಡು ಮಾತ್ರವಲ್ಲದೆ ಪರನಾಡಿನ ಗೌರವಕ್ಕೂ ಪಾತ್ರವಾಗಿದೆ.
> ಶ್ರೀ ಸಿದ್ಧತೋಟೇಂದ್ರ ಶಿವಾಚಾರ್ಯ, ಕೋರಿಸಿದ್ಧೇಶ್ವರ ಮಠ ನಾಲವಾರ
ಕರ್ನಾಟಕದಲ್ಲಿ ಮಠ-ಮಾನ್ಯಗಳು ಸರ್ವರಿಗೂ ಸನ್ಮಾರ್ಗ ತೋರಿವೆ. ಶಿಕ್ಷಣ, ಅನ್ನ, ಜ್ಞಾನ ನೀಡಿ ಎಲ್ಲರನ್ನು ಪೊರೆಯುತ್ತಿವೆ. ಸುಲಲ ಮಠಾಧೀಶರು ಮಠವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಲ್ಲದೆ ಸಮಾಜದ ಕಾರ್ಯಚಟುವಟಿಕೆಗಳಿಗೆ ಗಟ್ಟಿ ಧ್ವನಿಯಾಗಿ ನಿಲ್ಲುತ್ತಾರೆ.
> ಚಂದು ಪಾಟೀಲ್​ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net