

ಜಯತೀರ್ಥ ಪಾಟೀಲ
ಕಲಬುರಗಿ: ವರುಣ ಅವಕೃಪೆ ಹಿನ್ನೆಲೆಯಲ್ಲಿ ಜಿಲ್ಲೆಯ 11 ತಾಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಪೈಕಿ ಆರು ತಾಲೂಕುಗಳಲ್ಲಿ ಕೃಷಿ ಇಲಾಖೆ ಜಂಟಿ ಸಮೀಕ್ಷೆ ಕೈಗೊಂಡಿದ್ದು, 3,19,586 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾಗಿರುವ ಆಘಾತಕಾರಿ ಅಂಶ ಪತ್ತೆಯಾಗಿದೆ.
ಕೃಷಿ ಅಧಿಕಾರಿಗಳು ನಡೆಸಿದ ಸಮೀಕ್ಷೆ ಕಾಲಕ್ಕೆ ಅಫಜಲಪುರದಲ್ಲಿ 76,330, ಆಳಂದ 80,639, ಚಿತ್ತಾಪುರ 47,765, ಕಲಬುರಗಿ 62,306, ಶಹಾಬಾದ್ 14,188 ಮತ್ತು ಯಡ್ರಾಮಿ ತಾಲೂಕಿನಲ್ಲಿ 38,198 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೊಳಗಾಗಿದೆ ಎಂದು ಗುರುತಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ.
ಮುಂಗಾರಿನಲ್ಲಿ 8.90 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಸುಮಾರು 8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಐದು ತಾಲೂಕುಗಳ ಸಮೀಕ್ಷೆ ಕಾರ್ಯ ಪ್ರಗತಿ ಹಂತದಲ್ಲಿದೆ ಎಂದು ಮೂಲಗಳು ವಿಜಯವಾಣಿಗೆ ತಿಳಿಸಿವೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳನ್ನೊಳಗೊಂಡ ಜಂಟಿ ಸಮೀಕ್ಷೆ ಆಗುವುದು ಬಾಕಿ ಇದೆ. ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ಮಳೆಯಾಶ್ರಿತ ಪ್ರತಿ ಹೆಕ್ಟೇರ್ ಬೆಳೆಗೆ 8500 ರೂ. ಮತ್ತು ನೀರಾವರಿ ಆಶ್ರಿತ ಪ್ರತಿ ಹೆಕ್ಟೇರ್ ಬೆಳೆಗೆ 17,000 ರೂ. ಪರಿಹಾರ ನೀಡಲಾಗುತ್ತದೆ.
ಕಳೆದ ವರ್ಷ 250 ಕೋಟಿ ರೂ.ಬೆಳೆಹಾನಿ ಪರಿಹಾರ, 248.73 ರಾಜ್ಯದ ವಿಶೇಷ ಪ್ಯಾಕೇಜ್ ಮತ್ತು ಬೆಳೆವಿಮೆ ಪರಿಹಾರ 585 ಕೋಟಿ ರೂ. ಸೇರಿ ಒಟ್ಟು 1,083 ಕೋಟಿ ರೂ. ಪರಿಹಾರ ಜಿಲ್ಲೆಗೆ ದೊರೆತಿತ್ತು. ಈ ಒಟ್ಟೂ ಸೇರಿ ಕಳೆದ ಮೂರು ವರ್ಷದಲ್ಲಿ ಕಲಬುರಗಿ ಜಿಲ್ಲೆಗೆ 3024 ಕೋಟಿ ರೂ. ದೊರೆತಿದೆ.
ಈ ವರ್ಷದ ಬೆಳೆವಿಮೆಗೆ 4.53 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದು, 5.36 ಲಕ್ಷ ಹೆಕ್ಟೇರ್ ಬೆಳೆ ವಿಮೆಗೆ ಒಳಗಾಗಿದೆ. ಇದಕ್ಕಾಗಿ ರೈತರು 68 ಕೋಟಿ ರೂ. ವಿಮೆ ಪ್ರೀಮಿಯಂ ಭರಿಸಿದ್ದಾರೆ. ಹೆಸರು, ಉದ್ದು ಮತ್ತು ಸೋಯಾಬೀನ್ ಬೆಳೆಹಾನಿಗೆ ಮಧ್ಯಂತರ ಪರಿಹಾರ ೂಷಿಸಲಾಗಿದೆ. 27,800 ಹೆಕ್ಟೇರ್ ಬೆಳೆ, 37 ಸಾವಿರ ರೈತರಿಗೆ 16.50 ಕೋಟಿ ರೂ. ಪರಿಹಾರ ದೊರೆಯಲಿದೆ. ತೊಗರಿ, ಹತ್ತಿ, ಸಜ್ಜೆ ಸೇರಿ ಇತರೆ ಬೆಳೆಗೂ ಮಧ್ಯಂತರ ಪರಿಹಾರ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಕ್ಷೇತ್ರ ಪರಿಶೀಲನೆ ಕಾರ್ಯ ಶುರು ಮಾಡಿದೆ.
ಕಲಬುರಗಿ ಜಿಲ್ಲೆಯಲ್ಲಿ ಮಳೆರಾಯ ಮುನಿಸಿಕೊಂಡಿರುವ ಪರಿಣಾಮ ಬೆಳೆಹಾನಿ ಜತೆಗೆ ಜನ&ಜಾನುವಾರುಗಳಿಗೆ ಕುಡಿವ ನೀರು, ಮೇವು ಕೊರತೆ ಎದುರಾಗಿದೆ. ಮುಂಗಾರು ಆರಂಭದ ಜೂನ್ನಲ್ಲಿ 107.3 ಮಿಮೀ ಸಾಮಾನ್ಯ ಮಳೆಗೆ ಕೇವಲ 69.2 ಮಿಮೀ ಮಳೆಯಾಗಿದೆ. ಜುಲೈನಲ್ಲಿ 138.4 ಮಿಮೀ ಬದಲಾಗಿ 90.4, ಆಗಸ್ಟ್ನಲ್ಲಿ 155.6 ಮಿಮೀ ಬದಲು 63.9 ಸುರಿದಿದೆ. ಸೆ.22ರವರೆಗೆ 126.9 ಮಿ.ಮೀ ಮಳೆ ಪೈಕಿ ಕೇವಲ 36.5 ಮಿ.ಮೀ ಮಳೆಯಾಗಿದೆ. ಜೂನ್ನಿಂದ ಸೆ.22ರವರೆಗೆ 528.2 ಮಿಮೀ ಮಳೆಗೆ ಕೇವಲ 260 ಮಿಮೀ ಮಳೆ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಶೇ.80 ಮಳೆ ಕೊರತೆ ಎದುರಾಗಿದೆ. ಮುಂದಿನ ಹದಿನೈದು ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಕಡಿಮೆ.
ಕಲಬುರಗಿ ಎಪಿಎಂಸಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಈ ಅವಧಿಯಲ್ಲಿ ಬಂದಿರುವ ಉದ್ದು, ಹೆಸರು ತುಲನಾತ್ಮಕವಾಗಿ ನೋಡಿದರೆ ಗಣನೀಯ ಏರಿಳಿಕೆ ಕಂಡುಬಂದಿದೆ. ಒಂದು ಬಾರಿ ಬರ, ಮತ್ತೊಂದು ಬಾರಿ ಅತೀವೃಷ್ಟಿ ಇದಕ್ಕೆ ಕಾರಣ ಎನ್ನಬಹುದಾಗಿದೆ. 2023&24ನೇ ಸಾಲಿನಲ್ಲಿ ಉದ್ದು 16,190 ಕ್ವಿಂಟಾಲ್ ಆವಕವಾಗಿದೆ. 2024&25ನೇ ಸಾಲಿನಲ್ಲಿ 35,593 ಕ್ವಿಂಟಾಲ್, 2025&26ರಲ್ಲಿ 1,04,115 ಕ್ವಿಂಟಾಲ್ ಮತ್ತು 2026&27ನೇ ಸಾಲಿನ ಸೆಪ್ಟೆಂಬರ್ 20ರವರೆಗೆ 50,739 ಕ್ವಿಂಟಾಲ್ ಉದ್ದು ಎಪಿಎಂಸಿ ಮಾರುಕಟ್ಟೆಗೆ ಬಂದಿದೆ. ಹೆಸರು ಕಾಳು 2023&24ರಲ್ಲಿ 82,160, 2024&25ರಲ್ಲಿ 1,75,319, 2025&26ರಲ್ಲಿ 1,38, 932, 2026&27ರ ಸೆಪ್ಟೆಂಬರ್ 20ರವರೆಗೆ 84,573.55 ಕ್ವಿಂಟಾಲ್ ಆವಕ ಆಗಿದೆ. ಈ ಹೊತ್ತಿಗೆ ಆಳೆತ್ತರಕ್ಕೆ ಬೆಳೆದು ನಿಲ್ಲಬೇಕಿದ್ದ ತೊಗರಿ 1&2 ಅಡಿಯಷ್ಟು ಮಾತ್ರ ಬೆಳವಣಿಗೆ ಕಂಡಿದೆ. ಹಾಗೊಂದು ವೇಳೆ ಚೂರು&ಚಾರು ಬೆಳೆದರೂ ಇಳುವರಿ ಸಂಪೂರ್ಣ ಕುಂಠಿತಗೊಳ್ಳುವ ಸಾಧ್ಯತೆ ಇದೆ.