ರೇಬಿಸ್​ಮುಕ್ತ ಸಮಾಜಕ್ಕೆ ಒನ್​ಹೆಲ್ತ್​ ಪೂರಕ

ಕಲಬುರಗಿಯಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ರೇಬಿಸ್​ ದಿನ ಕಾರ್ಯಕ್ರಮವನ್ನು ಜಿಪಂ ಸಿಇಒ ರಾಹುಲ್​ ಸಂಕನೂರ ಉದ್ಘಾಟಿಸಿದರು. ಡಾ.ಸಂಜಯ ರೆಡ್ಡಿ, ಡಾ.ದಯಾನಂದ, ಡಾ.ಯಲ್ಲಪ್ಪ ಇಂಗಳೆ, ಡಾ.ಮಾವತ್ಕರ್​ ವೆಂಕಟೇಶ ಇತರರಿದ್ದರು.
ಕಲಬುರಗಿಯಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ರೇಬಿಸ್​ ದಿನ ಕಾರ್ಯಕ್ರಮವನ್ನು ಜಿಪಂ ಸಿಇಒ ರಾಹುಲ್​ ಸಂಕನೂರ ಉದ್ಘಾಟಿಸಿದರು. ಡಾ.ಸಂಜಯ ರೆಡ್ಡಿ, ಡಾ.ದಯಾನಂದ, ಡಾ.ಯಲ್ಲಪ್ಪ ಇಂಗಳೆ, ಡಾ.ಮಾವತ್ಕರ್​ ವೆಂಕಟೇಶ ಇತರರಿದ್ದರು.
Published on: 

ಕಲಬುರಗಿ: ಮಾನವ, ಪ್ರಾಣಿ-ಪಕ್ಷಿ ಅಥವಾ ಗಿಡ-ಮರಗಳ ಆರೋಗ್ಯ ಬೇರೆ ಬೇರೆ ಅಲ್ಲ. ಎಲ್ಲದಕ್ಕೂ ಇರೋದು ಒಂದೇ ಆರೋಗ್ಯ. ಒನ್​ ಹೆಲ್ತ್​ ಪರಿಕಲ್ಪನೆಯಿಂದ ರೇಬಿಸ್​ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್​ ಸಂಕನೂರ ಹೇಳಿದರು.

ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕಿಯ ಸಂಘದ ಸಹಯೋಗದಡಿ ವಿಶ್ವ ರೇಬಿಸ್​ ದಿನ ನಿಮಿತ್ತ ಜಿಪಂ ಹೊಸ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲೆಯ ಪಶು ವೈದ್ಯರ ತಾಂತ್ರಿಕ ಸಮ್ಮೇಳನ ಉದ್ಘಾಟಿಸಿದ ಅವರು, ಮಾನವ, ಪ್ರಾಣಿ-ಪಕ್ಷಿ ಹಾಗೂ ಪರಿಸರ ಆರೋಗ್ಯ ಒಂದಕ್ಕೊಂದು ಬೆಸೆದುಕೊಂಡಿದ್ದು, ಒಂದರಲ್ಲಿ ಏರುಪೇರಾದರೂ ಇಡೀ ಪ್ರಕೃತಿ ಸಮತೋಲನ ತಪ್ಪುತ್ತದೆ ಎಂದು ಎಚ್ಚರಿಸಿದರು.

ಪ್ರಕೃತಿ ಮತ್ತು ಪ್ರಾಣಿಗಳು ಆರೋಗ್ಯವಾಗಿದ್ದಾಗ ಮಾತ್ರ ಮಾನವ ಜನಾಂಗ ಸುರಕ್ಷಿತವಾಗಿರಲು ಸಾಧ್ಯ. ರೇಬಿಸ್​ ಲಸಿಕೆಯನ್ನು ಪ್ರಥಮ ಬಾರಿಗೆ ಸಂಶೋಧಿಸಿದ ಪ್ರಸಿದ್ಧ ವಿಜ್ಞಾನಿ ಲೂಯಿ ಪಾಶ್ಚರ್​ ನೆನಪಿನಲ್ಲಿ ರೇಬಿಸ್​ ತಡೆಗಟ್ಟುವಿಕೆ ಮತ್ತು ಜಾಗೃತಿ ಮೂಡಿಸುವ ವಿಶ್ವ ರೇಬಿಸ್​ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಸಂಜಯ ರೆಡ್ಡಿ ಮಾತನಾಡಿ, ನಾವು ಇಲ್ಲದಿದ್ದರೂ ಪ್ರಾಣಿಗಳು ಬದುಕಬಲ್ಲವು. ಆದರೆ ಪ್ರಾಣಿಗಳಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ನಾವು ಬೆಳಗ್ಗಿನ ಹಾಲು, ಪೌಷ್ಟಿಕ ಆಹಾರ ಹಾಗೂ ನಿತ್ಯದ ಅಗತ್ಯಗಳಿಗಾಗಿ ಪ್ರಾಣಿಗಳ ಮೇಲೆ ಅವಲಂಬಿತರಾಗಿದ್ದೇವೆ. ಮಾನವ ಮತ್ತು ಪ್ರಾಣಿಗಳ ನಡುವೆ ಸಂರ್ಷ ಹೆಚ್ಚುತ್ತಿರುವ ಈ ಸಮಯದಲ್ಲಿ ಗ್ರಾಮೀಣ ಮಟ್ಟದಲ್ಲಿ ಬೀದಿ ನಾಯಿಗಳ ನಿಯಂತ್ರಣ ಹಾಗೂ ರೇಬೀಸ್​ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಆನ್​ಲೈನ್​ ಪೋರ್ಟಲ್​ ಅಥವಾ ವಿವಿಧ ಫಾಮ್ಯಾರ್ಟ್​ಗಳಲ್ಲಿ ಆಂಥ್ರಾಕ್ಸ್​ ಅಥವಾ ಪಿಪಿಆರ್​ನಂತಹ ರೋಗಗಳಿಂದ ಸಂಭವಿಸಿದ ಸಾವಿನ ತಪ್ಪು ಮಾಹಿತಿ ನೀಡುವ ಮೂಲಕ ರೇಬಿಸ್​ ಖಾತೆಗೆ ಸೇರಿಸದಂತೆ ತಾಲೂಕು ಮಟ್ಟದ ಎಂಐಎಸ್​ ಸಂಯೋಜಕರು ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಲಬುರಗಿಯಲ್ಲಿ ಬೀದಿ ನಾಯಿಗಳ ಸಂತಾನಶಕ್ತಿಹರಣ ಚಿಕಿತ್ಸೆಗಾಗಿ ದೊಡ್ಡ ಮಟ್ಟದ ಎಬಿಸಿ ಸೆಂಟರ್​ ಪ್ರಾರಂಭಗೊಳ್ಳುತ್ತಿದ್ದು, ಪಶುವೈದ್ಯರ ಕೊರತೆ ನೀಗಿಸಲು ಪೇಡ್​ ಸರ್ವೀಸ್​ ಮಾದರಿಯಲ್ಲಿ ವೈದ್ಯರ ಸೇವೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪಶು ವೈದ್ಯಕಿಯ ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ.ದಯಾನಂದ ಹಕ್ಕಪಿಕ್ಕಿ ಮಾತನಾಡಿ, ರೇಬಿಸ್​ಮುಕ್ತ ವಾತಾವರಣ ನಿರ್ಮಿಸಲು ಪಶುಸಂಗೋಪನೆ, ಆರೋಗ್ಯ ಇಲಾಖೆ ಹಾಗೂ ಸ್ಥಳಿಯ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಕರ್ನಾಟಕ ಪಶು ವೈದ್ಯಕಿಯ ಸಂದ ಕಲಬುರಗಿ ಅಧ್ಯಕ್ಷ ಡಾ.ಯಲ್ಲಪ್ಪ ಇಂಗಳೆ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಶೇ.50ಕ್ಕೂ ಹೆಚ್ಚು ಹುದ್ದೆ ಖಾಲಿ ಇದ್ದರೂ ಇಲಾಖೆ ನಿರಂತರ ಸೇವೆ ಸಲ್ಲಿಸುತ್ತಿದೆ. 15 ದಿನಗಳಿಂದ ಜಿಲ್ಲೆಯ ವಿವಿಧ ಶಾಲಾ-ಕಾಲೇಜು, ತಾಲೂಕು ಕೇಂದ್ರಗಳಲ್ಲಿ 480ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2030ರ ವೇಳೆಗೆ ರೇಬಿಸ್​ಮುಕ್ತ ಸಮಾಜ ನಿರ್ಮಾಣ ಗುರಿಯೊಂದಿಗೆ ಆರೋಗ್ಯ ಇಲಾಖೆ ಸಹಯೋಗದಡಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇಎಸ್​ಐಸಿ ಸಹ ಪ್ರಾಧ್ಯಾಪಕ ಡಾ.ಮಾವತ್ಕರ್​ ಮುನ್ನಾಜಿ ವೆಂಕಟೇಶ ಹಾಗೂ ಬೀದರ್​ ಕೆವಿಎಎಫ್​ಎಸ್​ಯು ಪ್ರಾಧ್ಯಾಪಕ ಡಾ.ಸಂಜೀವಕುಮಾರ ಟೋಪನ್​ ವಿಶೇಷ ಉಪನ್ಯಾಸ ನೀಡಿದರು.

ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಸಂಗನಗೌಡ ಹೊಸಳ್ಳಿ, ಡಿಎಚ್​ಒ ಡಾ.ಶರಣಬಸಪ್ಪ ಕ್ಯಾತನಾಳ, ಕಲಬುರಗಿ ಸ್ಪೆಷಾಲಿಟಿ ಆಸ್ಪತ್ರೆ ಉಪ ನಿರ್ದೇಶಕ ಡಾ.ರಾಜು ದೇಶಮುಖ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪ ನಿರ್ದೇಶಕ ಡಾ.ರವೀಂದ್ರ ಬುರೆ ಇತರರಿದ್ದರು. ಡಾ.ಶಂಕರ ಕಣ್ಣಿ ಸ್ವಾಗತಿಸಿದರು. ಡಾ.ವಿಜಯಕುಮಾರ ವಂದಿಸಿದರು.

ವಿಶ್ವ ರೇಬಿಸ್​ ದಿನಾಚರಣೆ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಇದಕ್ಕೂ ಮುನ್ನ ನಗರ ಪೊಲೀಸ್​ ಆಯುಕ್ತರ ನೇತೃತ್ವದಲ್ಲಿ ಜಗತ್​ ವೃತ್ತದಿಂದ ಸರ್ದಾರ್​ ವಲ್ಲಭಭಾಯಿ ಪಟೇಲ್​ ವೃತ್ತದವರೆಗೆ ರೇಬಿಸ್​ ಜಾಗೃತಿ ಮ್ಯಾರಥಾನ್​ ನಡೆಯಿತು.

ರೇಬಿಸ್​ ಕಾಯಿಲೆ ನಾಯಿ, ಬೆಕ್ಕು, ಅಳಿಲು ಇತರ ಪ್ರಾಣಿಗಳ ಕಚ್ಚುವಿಕೆಯಿಂದ ಹರಡುತ್ತದೆ. ರೇಬಿಸ್​ ಶೇ.100 ಮಾರಕವಾದರೂ ಸಮಯಕ್ಕೆ ಸರಿಯಾಗಿ ಆ್ಯಂಟಿ-ರೇಬಿಸ್​ ಲಸಿಕೆ ಪಡೆದರೆ ಜೀವ ಉಳಿಸಬಹುದು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆ ಸಮನ್ವಯದೊಂದಿಗೆ ರೇಬಿಸ್​ಮುಕ್ತ ವಾತಾವರಣ ನಿರ್ಮಿಸಲು ಶ್ರಮಿಸಬೇಕು.
> ರಾಹುಲ್​ ಸಂಕನೂರ ಸಿಇಒ, ಜಿಪಂ ಕಲಬುರಗಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net