ನಮೋಶಿ ನಾಮಪತ್ರ ಗೊಂದಲ: ವಾದ, ಪ್ರತಿವಾರ ಆಲಿಸಿ ನಾಮಪತ್ರ ಸ್ವೀಕರಿಸಿದ ಚುನಾವಣಾಧಿಕಾರಿ

ಶಶೀಲ್ ನಮೋಶಿ
ಶಶೀಲ್ ನಮೋಶಿ
Published on: 

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರ ನಾಮಪತ್ರದ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಸೇರಿದಂತೆ ವಿವಿಧ ಅಭ್ಯರ್ಥಿಗಳು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಪ್ರಾದೇಶಿಕ ಆಯುಕ್ತೆ ಹಾಗೂ ಚುನಾವಣಾಧಿಕಾರಿ ಜಹೀರಾ ನಸ್ಸಿಮ್ ತಿರಸ್ಕರಿಸಿ, ನಮೋಶಿ ಅವರ ನಾಮಪತ್ರ ಅಂಗೀಕರಿಸಿದ್ದಾರೆ.

ಗುರುವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಶಶೀಲ್ ನಮೋಶಿ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಸಂಬಂಧಿಸಿದ ಪ್ರಕರಣವೊಂದು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಆಕ್ಷೇಪಿಸಿದರು. ಕ್ರಿಮಿನಲ್ ಪ್ರಕರಣ ಬಾಕಿ ಇರುವಾಗ ಅದನ್ನು ಅಫಿಡವಿಟ್‌ನಲ್ಲಿ ನಮೂದಿಸದೆ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ಮೂರು ಬಾರಿ ಹಿರಿಯ ಜನಪ್ರತಿನಿಧಿಯಾಗಿರುವ ಅಭ್ಯರ್ಥಿಯಿಂದ ಇಂತಹ ಮಾಹಿತಿ ನೀಡಿರುವುದು ಖಂಡನೀಯ. ಆದ್ದರಿಂದ ನಮೋಶಿ ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ವಾದಿಸಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ, ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಿರುದ್ಧ ಪ್ರಕರಣ ಬಾಕಿ ಇರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ತಮ್ಮ ದೃಷ್ಟಿಯಲ್ಲಿ ಎಲ್ಲವೂ ಸ್ಪಷ್ಟವಾಗಿದ್ದು, ಕಾನೂನು ಪ್ರಕಾರವೇ ನಾಮಪತ್ರ ಹಾಗೂ ಅಫಿಡವಿಟ್ ಸಲ್ಲಿಸಲಾಗಿದೆ. ಯಾವುದೇ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿಲ್ಲ. ಹೀಗಾಗಿ ನಾಮಪತ್ರ ಅಂಗೀಕರಿಸಬೇಕು ಎಂದು ಮನವಿ ಮಾಡಿದರು.

ಮಧ್ಯಪ್ರದೇಶದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮೀನಾಕ್ಷಿ ನಟರಾಜನ್ ಪ್ರಕರಣವನ್ನೂ ಉಲ್ಲೇಖಿಸಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷೇತರ ಅಭ್ಯರ್ಥಿಗಳು ನಮೋಶಿ ಅವರ ನಾಮಪತ್ರದ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆದಾರರು ಹಾಗೂ ಅಭ್ಯರ್ಥಿಗಳ ವಾದ–ಪ್ರತಿವಾದ ಆಲಿಸಿದ ಚುನಾವಣಾಧಿಕಾರಿ ಜಹೀರಾ ನಸ್ಸಿಮ್ ಅವರು ದಾಖಲೆಗಳನ್ನು ಪರಿಶೀಲಿಸಿದರು.

ಫಾರಂ–26ರಲ್ಲಿ ಸುಳ್ಳು ಘೋಷಣೆ ಮಾಡುವುದು ಅಥವಾ ಮಾಹಿತಿ ಮುಚ್ಚಿಡುವುದು ಜನಪ್ರತಿನಿಧಿತ್ವ ಕಾಯ್ದೆ–1951ರ ಸೆಕ್ಷನ್ 125ಎ ಅಡಿ ಕ್ರಮಕ್ಕೆ ಒಳಪಡುತ್ತದೆ ಎಂದು ಜಹೀರಾ ನಸ್ಸಿಮ್ ಸ್ಪಷ್ಟಪಡಿಸಿದರು. ಆದರೆ, ಈ ಸಂಬಂಧ ಕ್ರಮಕ್ಕೆ ಚುನಾವಣಾಧಿಕಾರಿಯೇ ದೂರು ಸಲ್ಲಿಸಬೇಕು ಎಂಬ ಕಡ್ಡಾಯವಿಲ್ಲ. ಸುಳ್ಳು ಘೋಷಣೆ ಅಥವಾ ಮಾಹಿತಿ ಮುಚ್ಚಿಟ್ಟಿರುವ ಬಗ್ಗೆ ಆಕ್ಷೇಪಣೆ ಹೊಂದಿರುವವರು ಸೂಕ್ತ ನ್ಯಾಯಾಲಯದ ಮೊರೆ ಹೋಗಬಹುದು ಎಂದು ತಿಳಿಸಿದರು.

ಈ ಹಿನ್ನೆಲೆ ಸಲ್ಲಿಕೆಯಾಗಿದ್ದ ಎಲ್ಲ ಆಕ್ಷೇಪಣೆಗಳನ್ನು ತಿರಸ್ಕರಿಸಿ, ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಶಶೀಲ್ ನಮೋಶಿ ಅವರ ನಾಮಪತ್ರ ಅಂಗೀಕರಿಸಲಾಗಿದೆ ಎಂದು ಆದೇಶಿಸಿದರು.

ಆಕ್ಷೇಪಣೆ ಇದ್ದರೆ, ನ್ಯಾಯಾಲಯದ ಮೊರೆ ಹೋಗಬಹುದು

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದೆ ಎಂಬ ಆರೋಪದ ಆಧಾರದಲ್ಲಿ ನಮೋಶಿ ನಾಮಪತ್ರಕ್ಕೆ ಆಕ್ಷೇಪಣೆ; ಆಕ್ಷೇಪಣೆ ತಿರಸ್ಕರಿಸಿದ ಆರ್‌ಒ ಜಹೀರಾ ನಸ್ಸಿಮ್. ಸುಳ್ಳು ಘೋಷಣೆ ಕುರಿತು ಆಕ್ಷೇಪಣೆ ಇರುವವರು ನ್ಯಾಯಾಲಯದ ಮೊರೆ ಹೋಗಬಹುದು.

ಪ್ರಕರಣ ಮುಚ್ಚಿಟ್ಟು ನಾಮಪತ್ರ ಸಲ್ಲಿಕೆ’: ಶರಣಪ್ಪ ಮಟ್ಟೂರು

ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಕ್ರಿಮಿನಲ್ ಪ್ರಕರಣ ಬಾಕಿ ಇದೆ. ಮೂರು ಬಾರಿ ಹಿರಿಯ ಜನಪ್ರತಿನಿಧಿಯಾಗಿರುವ ನಮೋಶಿ ಅವರು ಈ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ನಮೂದಿಸದೆ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ವಾದಿಸಲಾಗಿತ್ತು. ಆದರೆ ನಾಮಪತ್ರ ಸ್ವೀಕಾರವಾಗಿದ್ದು, ಚುನಾವಣೆ ಎದುರಿಸುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ತಿಳಿಸಿದರು.

ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ: ಶಶೀಲ್ ನಮೋಶಿ

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಎಲ್ಲವೂ ಕಾನೂನುಬದ್ಧವಾಗಿಯೇ ಇದೆ. ನನಗೆ ತಿಳಿದಿರುವ ಮಾಹಿತಿಯಂತೆ ಅಫಿಡವಿಟ್‌ನಲ್ಲಿ ಪ್ರಕರಣ ಇಲ್ಲ ಎಂದು ನಮೂದಿಸಿದ್ದೇನೆ. ಯಾವುದೇ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿಲ್ಲ. ಕಾನೂನು ಪ್ರಕಾರ ಸಲ್ಲಿಸಿರುವ ನನ್ನ ನಾಮಪತ್ರವನ್ನು ಅಂಗೀಕರಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net