

ಕಲಬುರಗಿ: ಕಲ್ಯಾಣ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಹರಿಯುವ ಭೀಮಾ ನದಿ ಒಡಲು ಮಹಾರಾಷ್ಟ್ರ ಸರ್ಕಾರ ಅಕ್ರಮ ಯೋಜನೆಗಳ ಮೂಲಕ ಹೆಚ್ಚುವರಿ ನೀರು ಹಿಡಿದಿಟ್ಟುಕೊಳ್ಳುತ್ತಿರುವ ಪರಿಣಾಮ ಬರಿದಾಗಿದೆ. ಕರ್ನಾಟಕ ಪಾಲಿನ 15 ಟಿಎಂಸಿ ನೀರು ಕಬಳಿಸುತ್ತಿದ್ದರೂ ಮಹಾ ಸರ್ಕಾರದ ವಿರುದ್ಧ ರಾಜ್ಯ ಸಮರ್ಪಕ ದನಿ ಎತ್ತದಿರುವುದು ದುರ್ದೈವದ ಸಂಗತಿ.
ಬಚಾವತ್ ತೀರ್ಪಿನ ಪ್ರಕಾರ ಮಹಾರಾಷ್ಟ್ರ 95 ಟಿಎಂಸಿ ನೀರು ಬಳಸಬೇಕು. ಆದರೀಗ ಹೆಚ್ಚುವರಿ 55 ಟಿಎಂಸಿ ನೀರು ಬಳಸುತ್ತಿದೆ. ನಂದಿ ಬೆಟ್ಟದಲ್ಲಿ ಆರಂಭವಾಗುವ ಪೆನ್ನಾರ ನದಿಯ 5 ಟಿಎಂಸಿ ನೀರು ಬಳಕೆ ಸಂಬಂಧ ತಮಿಳನಾಡು ಸರ್ಕಾರ ಕರ್ನಾಟಕ ವಿರುದ್ದ ಸುಪ್ರೀಂಕೋರ್ಟ್ ಮೊರೆ ಹೋಗಿ ನ್ಯಾಯಾಧಿಕರಣ ಮೂಲಕ ತನ್ನ ಪಾಲಿನ ಹಕ್ಕು ಪಡೆದಿರುವಾಗ ಮಹಾರಾಷ್ಟ್ರ ಸರ್ಕಾರ 55 ಟಿಎಂಸಿ ನೀರು ಅಕ್ರಮವಾಗಿ ಬಳಸುತ್ತಿದ್ದರೂ ಕರ್ನಾಟಕ ಸರ್ಕಾರ ಕಿಂಚಿತ್ತೂ ದನಿ ಎತ್ತದಿರುವುದು ಅಚ್ಚರಿ ಮೂಡಿಸಿದೆ.
ರಾಜ್ಯದ ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ 186 ಕಿಮೀ ಹರಿಯುವ ಭೀಮಾ ನದಿ ಹಕ್ಕಿನ ನೀರು ಬಳಕೆಗೆ ಸಂಬಂಧಿಸಿದಂತೆ 2002ರಲ್ಲಿ ರೈತರೇ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆಗ 15 ಟಿಎಂಸಿ ನೀರು ಬಳಕೆಗೆ ಸ್ಪಷ್ಟ ನಿರ್ದೆಶನ ನೀಡಿ ಎರಡು ದಶಕವಾದರೂ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ.
ಇನ್ನು ಕಾವೇರಿ ನೀರು ಬಳಕೆಗೆ ಬೀದಿಗಿಳಿಯುವ ವಿವಿಧ ಕನ್ನಡಪರ ಸಂಟನೆಗಳು ಭೀಮೆಗಾಗಿಯೂ ಹೋರಾಟದ ಮೂಲಕ ಸ್ವಾಭಿಮಾನ ತೋರಲಿ ಎಂಬುದು ಸಾರ್ವತ್ರಿಕ ಅಭಿಪ್ರಾಯ. ಕಾವೇರಿ ನೀರಿಗಾಗಿ ಆಗಾಗ್ಗೆ ಸುಪ್ರೀಂಕೋರ್ಟ್ ಕದ ತಟ್ಟುವ ಸರ್ಕಾರ ಭೀಮಾ ನೀರು ಬಳಕೆಗೇಕೆ ಕಾನೂನು ಸಮರಕ್ಕೆ ಮುಂದಾಗುತ್ತಿಲ್ಲ ಎಂಬ ಬಗ್ಗೆ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರೇ ಉತ್ತರ ನೀಡಬೇಕಿದೆ.
ಭೀಮಾ ನದಿ ಹಕ್ಕಿನ 15 ಟಿಎಂಸಿ ನೀರು ಬಳಕೆಗೆ ಕರ್ನಾಟಕ ಸರ್ಕಾರ ಯೋಜನೆ ರೂಪಿಸಿಲ್ಲ. ಆದರೆ ಮಹಾರಾಷ್ಟ್ರ ಭೀಮಾ ನೀರು ಅಕ್ರಮ ಬಳಕೆಗೆ ಯೋಜನೆ ರೂಪಿಸಿದೆ. 1990ರ ನಂತರ ಮಹಾರಾಷ್ಟ್ರ ಭೀಮಾ ನದಿಗೆ ಅಡ್ಡಲಾಗಿ ಅಕ್ರಮ ಬ್ಯಾರೇಜ್ ನಿರ್ಮಾಣ ಜತೆ ಸೀನಾ ನದಿಗೆ ಸುರಂಗ ಮಾರ್ಗ ನಿರ್ಮಿಸಿ ಜೀವಜಲ ಅಕ್ರಮ ಬಳಕೆಯೊಂದಿಗೆ ಸಂಗ್ರಹ ಮಾಡುತ್ತಿರುವುದರಿಂದ ಭೀಮೆ ಒಡಲಿಗೆ ಹನಿ ನೀರು ಹರಿದು ಬರುತ್ತಿಲ್ಲ. ವರ್ಷವಿಡೀ ನೀರು ಹಿಡಿದಿಡುವ ಮಹಾರಾಷ್ಟ್ರ ಮಳೆ ಬಂದು ಪ್ರವಾಹ ಎದುರಾದಾಗ ಮಾತ್ರ ಸಂಗ್ರಹಿಸಿಟ್ಟ ನೀರು ಹರಿಬಿಡುತ್ತಿದೆ. ಭೀಮೆಯಲ್ಲಿ ನೀರು ಅಭಾವ ಮತ್ತು ಪ್ರವಾಹ ಎರಡಕ್ಕೂ ನೇರವಾಗಿ ಮಹಾರಾಷ್ಟ್ರ ಹೊಣೆ ಎಂಬುದು ಕರ್ನಾಟಕ ಸರ್ಕಾರಕ್ಕೂ ಗೊತ್ತಿದೆ. ಆದರೆ ಯಾರೊಬ್ಬರೂ ಚಕಾರ ಎತ್ತದಿರುವುದು ವಿಚಿತ್ರ.
ಹಂಚಿಕೆಯಂತೆ ರಾಜ್ಯದಲ್ಲಿ 15 ಟಿಎಂಸಿ ಭೀಮಾ ನದಿ ನೀರು ಸಮರ್ಪಕ ಬಳಸುವಂತಾಗಬೇಕು. ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ, ಕಲಬುರಗಿ ಜಿಲ್ಲೆಯ ಅಫಜಲಪುರ, ಆಳಂದ, ಜೇವರ್ಗಿ, ಚಿತ್ತಾಪುರ, ಯಾದಗಿರಿ ಜಿಲ್ಲೆ ಹಾಗೂ ಭೀಮಾ ಹರಿಯುವ ಇತರ ಕ್ಷೇತ್ರದ ಶಾಸಕರು ಮಹಾರಾಷ್ಟ್ರ ಅಕ್ರಮ ಯೋಜನೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ಸುಪ್ರೀಂಕೋರ್ಟ್ಗೆ ತಕರಾರು (ದೂರು) ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವುದು ಅನಿವಾರ್ಯ. ಪಭೇದ ಮರೆತು ಕಾವೇರಿ ನೀರು ಬಳಕೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಒಂದಾಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಾರೋ ಅದೇ ರೀತಿ ಭೀಮಾ ತೀರದ ಶಾಸಕ&ಸಂಸದರಲ್ಲೂ ಸ್ವಾಭಿಮಾನ ಬರಲಿ. ಕಾವೇರಿಗೆ ತೋರುವ ಕಾಳಜಿ ಸರ್ಕಾರ ಭೀಮೆಗೂ ತೋರಲಿ ಎಂಬುದು ಈ ಭಾಗದ ಅನ್ನದಾತರ ಒತ್ತಾಸೆಯಾಗಿದೆ.