

ಯಡ್ರಾಮಿ: ಬರಗಾಲದಿಂದ ತತ್ತರಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಯಡ್ರಾಮಿ ತಾಲೂಕಿನ ಇಜೇರಿಯಿಂದ ಸೈದಾಪುರ ಕ್ರಾಸ್ವರೆಗೆ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಳಪೆ ಕಾಮಗಾರಿ ಕುರಿತು ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಇಜೇರಿ ಗ್ರಾಮದ ಯಡ್ರಾಮಿ&ಜೇವರ್ಗಿ ರಸ್ತೆಯಲ್ಲಿ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ಕೃಷಿ ಸಂಬಂಧಿತ ಸಾಲ ಮನ್ನಾ ಮಾಡಬೇಕು. ರೈತರ ಅಳಿದುಳಿದ ಹತ್ತಿ, ತೊಗರಿ ಹಾಗೂ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಕೆಕೆಆರ್ಡಿಬಿಯಿಂದ 25 ಕೋಟಿ ರೂ. ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 20 ಕೋಟಿ ರೂ. ಅನುದಾನದಲ್ಲಿ ಇಜೇರಿಯಿಂದ ಸೈದಾಪುರ ಕ್ರಾಸ್ವರೆಗಿನ ರಸ್ತೆ ಡಾಂಬರೀಕರಣ ಹಾಗೂ ಇಜೇರಿಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಇವೆರಡು ಕಳಪೆ ಮಟ್ಟದಿಂದ ಕೂಡಿದ್ದು, ಸಮರ್ಪಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸುಮಾರು 7 ಗಂಟೆ ಸಂಚಾರ ಬಂದ್ ಮಾಡಿ ಹೋರಾಟ ಮಾಡಲಾಯಿತು. ರಸ್ತೆಯಲ್ಲಿಯೇ ಅಡುಗೆ ತಯಾರಿಸಿ ಭೋಜನ ಸವಿದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು.
ಪ್ರಮುಖರಾದ ಶ್ರವಣಕುಮಾರ ನಾಯಕ, ನಿಂಗಣ್ಣ ಚಿಗರಹಳ್ಳಿ, ಸೈದಪ್ಪ ಹೊಸಮನಿ, ದೇವು ಲಕಣಾಪುರ, ಬಸವರಾಜ ಕಿಲೇದಮನಿ, ಕಲ್ಯಾಣಿ ಹೂಗಾರ, ಭಿಮಣ್ಣ ಕಿಲೇದಮನಿ, ಮೌನೇಶ ಹಾಲಗಡ್ಲಾ, ಗುಂಡಪ್ಪ ಕಿಲೇದಮನಿ, ಬಸ್ಸು ಹೂಗಾರ, ಪ್ರಭು ಸುಂಬಡ, ರವಿ ಯಂಕಂಚಿ, ಲಾಲ್ ಪಟೇಲ್ ಚಿಗರಹಳ್ಳಿ, ಗುಂಡಪ್ಪ ಹಾಲಗಡ್ಲ, ಶರಣಗೌಡ, ರಮೇಶ ಮೇಲಗಿರಿ ಇತರರಿದ್ದರು.