ಕಲಬುರಗಿ: ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರ ಹಿಂದಿನಂತೆ ಆಚರಣೆ ಮಾಡಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಟಿಪ್ಪು ಸುಲ್ತಾನ್ ವಂಶಸ್ಥ ಸಯ್ಯದ್ ಮನ್ಸೂರ್ ಅಲಿ ಟಿಪ್ಪು ತಿಳಿಸಿದರು.
ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಟಿಪ್ಪು ಉತ್ಸವ-2026 ಕಾರ್ಯಕ್ರಮದಲ್ಲಿ ಮಾತನಾಡಿ, ಟಿಪ್ಪು ಸುಲ್ತಾನ್ ವಿಷಯವನ್ನು ಹಿಂದಿನ ಬಿಜೆಪಿ ಸರ್ಕಾರ ಪಠ್ಯದಿಂದ ತೆಗೆದುಹಾಕಿದ್ದನ್ನು ಮರುಸೇರಿಸಲು ಸಚಿವ ಯು.ಟಿ. ಖಾದರ್ ಮತ್ತು ಶಿಕ್ಷಣ ಸಚಿವ ರಾಯರಡ್ಡಿ ಅವರನ್ನು ಭೇಟಿ ಒತ್ತಾಯಿಸಲಾಗಿದೆ. ಎಲ್ಲ ಜಿಲ್ಲೆಗಳಿಂದಲೂ ಸರ್ಕಾರದ ಮೇಲೆ ಒತ್ತಡ ಹೇರಲು ಸಮಿತಿ ರಚಿಸಲಾಗುವುದು. ಸರ್ಕಾರವು ಜಯಂತಿಗೆ ಅನುಮತಿ ನೀಡಲಿ ಅಥವಾ ಬಿಡಲಿ. ಟಿಪ್ಪು ಸುಲ್ತಾನ್ ಅವರ ಅಭಿಮಾನಿಗಳು ಜಯಂತಿ ಮುಂದುವರಿಸುತ್ತಾರೆ ಎಂದರು.
ಟಿಪ್ಪು ಸುಲ್ತಾನ್ ತನ್ನ ರಾಜ್ಯದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಿದ್ದರು. ಹಿಂದೂ ವಿರೋಧಿಯಾಗಿರಲಿಲ್ಲ. ಮಸೀದಿಗಳನ್ನು ನಿರ್ಮಿಸಿದಲ್ಲೆಲ್ಲ, ದೇವಾಲಯ ನಿರ್ಮಾಣಕ್ಕೂ ಆದ್ಯತೆ ನೀಡಿದ್ದರು. ಪ್ರತಿ ಜಿಲ್ಲೆಯಲ್ಲಿ ಟಿಪ್ಪು ಭವನ ಮತ್ತು ಸ್ಮಾರಕ ನಿರ್ಮಿಸಬೇಕು. ದೊಡ್ಡ ಕಾನೂನು ಮತ್ತು ವೈದ್ಯಕಿಯ ಕಾಲೇಜು ನಿರ್ಮಿಸಬೇಕು. ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಜಾತ್ಯತಿತ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಟಿಪ್ಪು ಸುಲ್ತಾನ್ ಕೇವಲ 48-49 ವರ್ಷ ಬದುಕಿದ್ದರು. ಆದರೆ ಅವರ ಸಾಧನೆ ಅಪಾರವಾಗಿದೆ. ಆಡಳಿತದಲ್ಲಿ ಪ್ರಮುಖ ಹುದ್ದೆಗಳಲ್ಲಿ ಹಿಂದೂಗಳೇ ಇದ್ದರು. ಶೃಂಗೇರಿ ಶಾರದಾಂಬೆ ಪೀಠ ನಾಶ ಆದಾಗ ಟಿಪ್ಪು ನೆರವಿಗೆ ಬಂದರು. ದೇವಸ್ಥಾನಗಳಿಗೂ ಅನೇಕ ಸೌಲಭ್ಯ ಕೊಟ್ಟರು. ಹಿಂದೂ, ಮುಸ್ಲಿಂ, ಜೈನ, ಸಿಖ್, ಇಸಾಯಿ ಸೇರಿ ಎಲ್ಲ ಜಾತಿ, ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂಥ ವ್ಯಕ್ತಿತ್ವ ಟಿಪ್ಪು ಸುಲ್ತಾನ್ ಅವರಲ್ಲಿತ್ತು ಎಂದು ಬಣ್ಣಿಸಿದರು.
ಸಮಾಜ ಸೇವಕ ಡಾ.ಫಾರೂಕ್ ಅಹ್ಮದ್ ಮಣೂರ ಮಾತನಾಡಿ, ಹುಲಿಯಂತೆ ಬದುಕಿದ, ಹುಲಿಯಂತೆ ಹೋರಾಡಿದ ಮತ್ತು ಹುಲಿಯಂತೆ ಇತಿಹಾಸದಲ್ಲಿ ಉಳಿದವರು ಟಿಪ್ಪು ಸುಲ್ತಾನ್. ಒಬ್ಬ ವೀರನ ಧೈರ್ಯವನ್ನು ಗೌರವಿಸಲು ನಾವಿಲ್ಲಿ ಸೇರಿದ್ದೇವೆ. ಟಿಪ್ಪು ದೇವಾಲಯ ಸೇರಿ ಹಿಂದೂ ಸಮಾಜಕ್ಕೆ ಎಷ್ಟು ಕೊಡುಗೆ ಕೊಟ್ಟಿದ್ದಾರೆಂಬುದು ಇತಿಹಾಸ ಓದಿದರೆ ತಿಳಿಯುತ್ತದೆ ಎಂದರು.
ಶ್ರೀ ಡಾ.ಮಲ್ಲಣ್ಣಪ್ಪ ಸ್ವಾಮೀಜಿ, ಭಂತೆ ಅಮರಜ್ಯೋತಿ, ನೀಲಕಂಠರಾವ ಮೂಲಗೆ, ಹಣಮಂತ ಯಳಸಂಗಿ, ಡಾ.ವೆಂಕನಗೌಡ ಆರ್.ಪಾಟೀಲ್, ಡಾ.ಮಲ್ಲಿಕಾರ್ಜುನ ಶೆಟ್ಟಿ, ವಾಹಬ್ ಬಾಬಾ, ಸಯ್ಯದ್ ನಿಸಾರ್ ಅಹ್ಮದ್, ಸಯ್ಯದ್ ನಜಿರೋದ್ದಿನ್ ಮುತ್ತವಲಿ, ಸಿದ್ದರಾಮ ಪ್ಯಾಟಿ, ಫಿರೋಜ್ ಖಾನ್, ಮಹಿಬೂಬ್ ಮಣಿಯಾರ್, ಅಸದ್ ಅಲಿ ಅನ್ಸಾರಿ, ಸಾಬೀರ್ ಬಾರಿ ಇತರರಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ದಸ್ತಗಿರ ನದಾಫ್ ಯಳಸಂಗಿ, ಸವಿತಾ ಬಿ.ನಾಸಿ, ಎಂ.ಬಿ. ಕಟ್ಟಿ, ಈಶ್ವರ ತಳವಾರ, ರಹಿಮಾನ ಪಟೇಲ್, ಸುಭಾಷ ಬದಾಮಿ ಅವರಿಗೆ ಟಿಪ್ಪು ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.