ಜಾತ್ರೆ ವೇಳೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಸಂತೋಷ ನಿಂಬಾಳ
ಸಂತೋಷ ನಿಂಬಾಳ
Published on: 

ಆಳಂದ: ಮಾಡಿಯಾಳ ಗ್ರಾಮದಲ್ಲಿ ಅಲ್ಲಮಪ್ರಭು ಜಾತ್ರೆ ವೇಳೆ ಬ್ಯಾನರ್​ ಹಾಕುವ ವಿಚಾರದಲ್ಲಿ ಆರಂಭವಾಗಿದ್ದ ವೈಷಮ್ಯ ಭಾನುವಾರ ಮಧ್ಯರಾತ್ರಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯ ಕಂಡಿದೆ.

ಗ್ರಾಮ ಪಂಚಾಯಿತಿಯಲ್ಲಿ ಪಂಪ್​ ಆಪರೇಟರ್​ ಆಗಿದ್ದ ಸಂತೋಷ ಹಣಮಂತ ನಿಂಬಾಳ (37) ಕೊಲೆಯಾದವ. ಭಾನುವಾರ ರಾತ್ರಿ 11ರ ಸುಮಾರಿಗೆ ಸಂತೋಷ ಮನೆಯಿಂದ ಹೊರಗೆ ತೆರಳಿದ್ದಾಗ ಬಸವರಾಜ ಭಾಗಳ್ಳಿ ಮನೆ ಎದುರಿನ ಸಿಸಿ ರಸ್ತೆಯಲ್ಲಿ ಕೆಲವರು ತಡೆದು ಜಗಳ ಆರಂಭಿಸಿದರು.

ಅಲ್ಲಮಪ್ರಭು ಜಾತ್ರೆ ಬ್ಯಾನರ್​ ಹಾಕುವ ವಿಚಾರ ಪ್ರಸ್ತಾಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಲ್ಲದೆ ಸಿದ್ದರಾಮ, ಗಣೇಶ, ಗಂಗಾಧರ, ಅಮರನಾಥ ಮತ್ತು ಭೀಮಾಶಂಕರ ಸೇರಿ ಸಂತೋಷನ ಕೈಗಳನ್ನು ಹಿಡಿದಿದ್ದು, ಮಂಜುನಾಥ ಪೊಲೀಸ್​ ಪಾಟೀಲ್​ ಎಂಬಾತ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ ಎಂದು ಮೃತನ ತಾಯಿ ಅಂಬುಬಾಯಿ ನಿಂಬಾಳ ನಿಂಬರ್ಗಾ ಠಾಣೆಗೆ ದೂರು ನೀಡಿದ್ದಾರೆ.

ತೀವ್ರ ಗಾಯಗೊಂಡಿದ್ದ ಸಂತೋಷನನ್ನು ಕೂಡಲೇ ನಿಂಬರ್ಗಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬುಲೆನ್ಸ್​ನಲ್ಲಿ ಕಲಬುರಗಿ ಜಿಮ್ಸ್​ಗೆ ಸಾಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ.

ಎಸ್​ಪಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್​ಪಿ ತಮ್ಮರಾಯ ಪಾಟೀಲ್​, ಸಿಪಿಐ ಜಗದೀಶ ಕೆ.ಜಿ., ಪಿಎಸ್​ಐ ಸಂಗಮೇಶ ಅಂಗಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವರನ್ನು ವಶಕ್ಕೆ ಪಡೆದಿದ್ದು, ಉಳಿದವರ ಪತ್ತೆಗೆ ಶೋಧ ಮುಂದುವರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net