ದೇಶದ ಸದೃಢತೆ ಶ್ರಮಿಸಿ: ಶಾಸಕ ಆನಂದ ನ್ಯಾಮಗೌಡ

JKD-31-1
Published on


ಜಮಖಂಡಿ: ದೇಶದ ಕೋಟ್ಯಂತರ ಜನತೆ ಶಾಂತಿ ನೆಮ್ಮದಿಯಿಂದ ಜೀವಿಸಲು ಡಾ.ಬಿ.ಆರ್. ಅಂಬೇಡ್ಕರ್ ಎಲ್ಲರಿಗೂ ಸಮಾನ ಹಕ್ಕು ದೊರೆಯುವಂತೆ ಮಾಡಿದರು. ಅವರ ಮಾರ್ಗದರ್ಶನದಲ್ಲಿ ನಾವು ನೀವು ನಡೆದುಕೊಳ್ಳಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮರು ನಿರ್ಮಾಣದ ಅಂದಾಜು 8.58 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಡಾ.ಬಾಬಾಸಾಹೇಬ್ ಭಾರತದ ಸಂವಿಧಾನ ರಚಿಸಿ ವಿಶ್ವಕ್ಕೆ ಮಾದರಿಯಾದ ಮಹಾನ್ ವ್ಯಕ್ತಿಯಾಗಿದ್ದಾರೆ. ಭಾರತವನ್ನು ಸದೃಢ ದೇಶವನ್ನಾಗಿಸಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ನಮ್ಮ ತಂದೆ ದಿ.ಸಿದ್ದು ನ್ಯಾಮಗೌಡರು ಅವರ ಕಾಲದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತವನ್ನು ಉದ್ಘಾಟಿಸಿದ್ದರು. ಈಗ ಅದೇ ವೃತ್ತದ ನವನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡುವ ಭಾಗ್ಯ ಸಿಕ್ಕಿದ್ದು ನನಗೆ ಹರ್ಷ ತಂದಿದೆ ಎಂದರು.

ನವನಿರ್ಮಾಣದ ಕಾರ್ಯವನ್ನು ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸುತ್ತೇನೆ. ನಮ್ಮ ತಂದೆಯವರು ಕಟ್ಟೆ ಕರೆ ಉದ್ಯಾನವನ್ನು ನೋಡಲು ವಿದೇಶಿಗರು ಬರುವಂತೆ ಮಾಡುವ ಕನಸು ಕಂಡಿದ್ದರು. ಅವರ ಕನಸಿನಂತೆ ಉದ್ಯಾನವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಮಕ್ಕಳ ಮನರಂಜನೆಗಾಗಿ ರೈಲು ಗಾಡಿಯಲ್ಲಿ ಕುಳಿತು ಉದ್ಯಾನದಲ್ಲಿ ತಿರುಗಾಡುವಂತೆ ಮಾಡಲಾಗಿದೆ ಎಂದರು.

ಮುಖಂಡ ಎ.ಆರ್. ಶಿಂಧೆ, ನಗರಸಭೆ ಸದಸ್ಯ ಪ್ರಕಾಶ ಹಂಗರಗಿ, ನಗರಸಭೆ ಪೌರಾಯುಕ್ತ ರಾಮಕೃಷ್ಣ ಸಿದ್ಧನಕೊಳ್ಳ ಮಾತನಾಡಿದರು. ಸಹಜಾನಂದ ಅವಧೂತರು ಆಶೀರ್ವದಿಸಿದರು. ಕೃಷ್ಣಾನಂದ ಅವಧೂತರು, ಈಶ್ವರ ವಾಳೆನ್ನವರ, ದಾನೇಶ ಘಾಟಗೆ, ಕುಶಾಲ ವಾಗ್ಮೋರೆ, ಪರಮಾನಂದ ಗೌರೋಜಿ ಇದ್ದರು. ನಗರಸಭೆ ಸದಸ್ಯ ಸಿದ್ದು ಮೀಶಿ ಸ್ವಾಗತಿಸಿದರು.

ಜಮಖಂಡಿ ಅಭಿವೃದ್ಧಿಗೆ ಸಹಕರಿಸಿ
ನಗರದಲ್ಲಿ ನಡೆಯುತ್ತಿರುವ ಗುಡಿ, ಗುಂಡಾರ, ಮಸೀದಿ ತೆರವು ಕಾರ್ಯಾಚರಣೆಯನ್ನು ಸುಪ್ರೀಂಕೋರ್ಟ್ ಆದೇಶದಂತೆ ಮಾಡಲಾಗುತ್ತಿದೆ. ಇದು ರಾಜ್ಯಾದ್ಯಂತ ನಡೆಯುತ್ತಿದೆ. ಜಮಖಂಡಿಯಲ್ಲಿ ಜನದಟ್ಟಣೆಯಿಂದ ಆಗುವ ತೊಂದರೆ ನಿವಾರಿಸಲು ಶೀಘ್ರದಲ್ಲಿ ಮಾಸ್ಟರ್ ಪ್ಲಾೃನ್ ಕುರಿತು ಚರ್ಚಿಸಲು ಅಧಿಕಾರಿಗಳ ಸಭೆ ಕರೆಯಲಾಗುತ್ತದೆ. ರೈಲ್ವೆ ಕಾಮಗಾರಿ ವಿಳಂಬವಾಗುತ್ತಿದ್ದು, ಈ ಕುರಿತು ಬರುವ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಶೀಘ್ರ ಕಾಮಗಾರಿ ಮುಕ್ತಾಯ ಮಾಡಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net