ಜಗಳೂರು ಕೆರೆ ಒಡಲು ತುಂಬಿದ ತುಂಗಭದ್ರೆ

62
Published on

ಜಗಳೂರು: ಸದಾ ಬರಗಾಲದಿಂದ ಸೋತು ಸುಣ್ಣಾಗಿದ್ದ ಜನರಿಗೆ ಜಗಳೂರು ಕೆರೆಗೆ ಶುಕ್ರವಾರ ನೀರು ಹರಿದು ಬರುತ್ತಿದ್ದಂತೆ ಎಲ್ಲರಲ್ಲೂ ಸಂತಸದ ಸಂಭ್ರಮ ಮನೆ ಮಾಡಿದೆ.

ಸತತ ಹೋರಾಟದ ಫಲವಾಗಿ ಹಂತ ಹಂತವಾಗಿ ತಾಲೂಕಿನ 57 ಕೆರೆಗಳಿಗೆ ತುಂಗಭದ್ರಾ ನದಿಯ ಏತಾ ನೀರಾವರಿ ಯೋಜನೆ ಮೂಲಕ ನೀರು ಕೆರೆಗಳಿಗೆ ಹರಿದು ಬರುತ್ತಿದೆ.

ಬೆಳಗ್ಗೆ ಕೊಡದಗುಡ್ಡ ಕೆರೆಗೆ ಹರಿದ ಗಂಗೆ ಮಧ್ಯಾಹ್ನ ಜಗಳೂರು ಪಟ್ಟಣದ ಕೆರೆಗೆ ಆಗಮಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಹರ್ಷೋದ್ಗಾರ ಮಾಡಿದರು.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಜನರ ಗುಂಪು ಕೆರೆಯತ್ತ ಧಾವಿಸಿತು. ಬೈಕ್, ಕಾರು, ಆಟೋಗಳಲ್ಲಿ ಜನರು ಹರಿದು ಬಂದರು. ನೀರು ಪೈಪ್‌ನ ಕಾರಂಜಿಯಲ್ಲಿ ಚಿಮ್ಮುತ್ತಿರುವುದನ್ನು ನೋಡಿ ಖುಷಿಪಟ್ಟರು.

ದೀಟೂರು ಸಮೀಪದ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಪಂಪ್‌ಹೌಸ್‌ನಲ್ಲಿ ಈಗಾಗಲೇ ಮೂರು ಮೋಟಾರ್‌ಗಳು ಚಾಲನೆಯಲ್ಲಿವೆ. ಹೀಗಾಗಿ, ಜಗಳೂರು ಮತ್ತು ಅರಸೀಕೆರೆ ಭಾಗದ 30 ಕೆರೆಗಳಿಗೆ ನೀರು ಹರಿಯುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮನದ ಇಂಜಿನಿಯರ್‌ಗಳಾದ ಎಸ್. ಶ್ರೀಧರ್ ಮತ್ತು ಎಇ ಆನಂದ್ ಪ್ರತಿಕ್ರಿಯೆ ನೀಡಿದರು.

ನೀರು ಹರಿಯುತ್ತಿರುವ ಕೆರೆಗಳು: ತುಪ್ಪದಹಳ್ಳಿ, ಮುಷ್ಟಿಗಹರಳ್ಳಿಯ ದೊಡ್ಡಕೆರೆ ಮತ್ತು ಸಣ್ಣಕೆರೆ, ಚನ್ನಾಪುರ, ಭೈರನಾಯಕಹಳ್ಳಿ, ಹಿರೇಅರಕೆರೆ, ಚಿಕ್ಕಅರಕೆರೆ, ಜಗಳೂರು, ಬಿಳಿಚೋಡು, ಕಾಟೇನಹಳ್ಳಿ, ಮಾದಹಳ್ಳಿ, ಗೋಡೆ, ತಾರೆಹಳ್ಳಿ, ಉರ್ಲಕಟ್ಟೆ, ಮರೀಕುಟುಂಟೆ, ಚದರಗೊಳ್ಳ, ಕುರೆಮಗಹಳ್ಳಿ, ಯು-ಕಲ್ಲಹಳ್ಳಿ, ಹಳವದಂಡೆ ಮತ್ತು ಕೊರಟಕೆರೆ ಲಂಬಾಣಿ ಹಟ್ಟಿ ಕೆರೆಗಳಿಗೆ ಪ್ರಸ್ತುತ ನೀರು ಹರಿಸಲಾಗುತ್ತಿದೆ. ಶನಿವಾರ ಕೆಳಗೋಡೆ, ಕೆಚ್ಚೇನಹಳಿ, ಬೇವಿನಹಳ್ಳಿ, ಪುಣಬಘಟ್ಟ, ನಂದಿಕಂಭ, ಹಾಲೇಕಲ್ಲು, ಗೌಡಗೊಂಡನಹಳ್ಳಿ, ಕ್ಯಾಸೇನಹಳ್ಳಿ ಮತ್ತು ಚಟ್ನಳ್ಳಿ ಕೆರೆಗಳಿಗೆ ನಾಲ್ಕನೇ ಮೋಟಾರ್ ಆನ್ ಮಾಡಿ ನೀರು ಹರಿಸಲಾಗುವುದು ಎಂದು ವಿವರಿಸಿದರು.

ಉಳಿದಂತೆ 15 ದಿನಗಳಲ್ಲಿ ಬಿಸ್ತುವಳ್ಳಿ, ರಸ್ತೆ ಮಾಕುಂಟೆ ಮತ್ತು ಮಠದ ದ್ಯಾಮವ್ವನಹಳ್ಳಿ ಕೆರೆಗಳಿಗೆ ನೀರು ಹರಿಸುತ್ತೇವೆ. ಇನ್ನು ಒಂದು ತಿಂಗಳ ಒಳಗೆ ಜಗಳೂರು ತಾಲೂಕಿನ 53 ಕೆರೆಗಳಿಗೆ ನೀರು ಹರಿಸುತ್ತೇವೆ. 120 ದಿನಗಳ ಕಾಲ ಸಮಯವಿದ್ದು, ನಿಯಮದಂತೆ ಕೆರೆಗಳನ್ನು ಶೇ.50ರಷ್ಟು ತುಂಬಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಈವರೆಗೂ ಯಾವುದೇ ತಾಂತ್ರಿಕ ತೊಂದರೆಯಾಗಿಲ್ಲ. ಸಣ್ಣಪುಟ್ಟ ತೊಂದರೆಯಾದರೆ ಶೀಘ್ರವೇ ಸರಿಪಡಿಸಿ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಇಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net