

ಮಳವಳ್ಳಿ: ತಾಲೂಕಿನ ರೈತರ ಹಿತಕಾಯುವಲ್ಲಿ ಶಾಸಕರು ವಿಫಲವಾಗಿದ್ದು, ನೈಸರ್ಗಿಕವಾಗಿ ಮಳೆಯಿಂದ ನೀರು ತುಂಬಿದ ಕೆರೆ-ಕಟ್ಟೆಗಳಿಗೆ ಬಾಗಿನ ಬಿಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿರುದ್ಧ ಕಿಡಿಕಾರಿದರು.
ರೈತರ ವಿರೋಧದ ನಡುವೆಯೂ ಸರ್ಕಾರದಿಂದ ಗಗನಚುಕ್ಕಿ ಜಲಪಾತೋತ್ಸವ ಆಚರಿಸುವ ಮೂಲಕ ಮೋಜು ಮಸ್ತಿಯಲ್ಲಿ ಇಲ್ಲಿನ ಶಾಸಕ ತೊಡಗಿದ್ದಾರೆ. ಕ್ಷೇತ್ರದ ಮುಖಂಡರ ಜತೆಗೂಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ನಂತರ ನಾಲೆಗಳಲ್ಲಿ ನೀರು ಹರಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಬಹಳಷ್ಟು ಪ್ರದೇಶದಲ್ಲಿ ನಾಟಿ ಕಾರ್ಯಮಾಡಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಹಲವು ದಿನಗಳಿಂದ ಉತ್ತಮ ಮಳೆಯಾಗಿ ನೈಸರ್ಗಿಕವಾಗಿ ಹರಿದು ಬಂದ ನೀರಿನಿಂದ ತುಂಬಿರುವ ಹಲವು ಕೆರೆಗಳಿಗೆ ಯಾವ ಸಂಭ್ರಮಕ್ಕಾಗಿ ಅ.7 ರಂದು ಬಾಗಿನ ಅರ್ಪಿಸುತ್ತೇನೆಂದು ಶಾಸಕ ನರೇಂದ್ರಸ್ವಾಮಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಮೂದಲಿಸಿದರು.
ಅಣೆಕಟ್ಟೆಯಲ್ಲಿ ನೀರಿದ್ದರೂ ತಾಲೂಕಿನ ರೈತರಿಗೆ ರಾಜಕೀಯ ದುರುದ್ದೇಶದಿಂದ ನಾಲೆಗಳಲ್ಲಿ ನೀರು ಕೊಡಿಸಲು ಆಸಕ್ತಿ ವಹಿಸಿಲ್ಲ. ಶಾಸಕನನ್ನಾಗಿ ಆಯ್ಕೆ ಮಾಡಿರುವ ಜನರ ಸಮಸ್ಯೆಗಳಿಗೆ ದನಿಯಾಗಲಿ ಎಂಬುದಕ್ಕಾಗಿಯೇ ಹೊರತು ದ್ವೇಷದ ರಾಜಕಾರಣ ಮಾಡುವುದಕ್ಕಾಗಿ ಅಲ್ಲ. ಮತದಾರ ನೀಡಿರುವ ಅಲ್ಪ ಕಾಲದ ಅಧಿಕಾರವನ್ನು ಜನೋಪಯೋಗಿ ಕೆಲಸಕ್ಕೆ ಬಳಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.