ಐಪಿಪಿಬಿ ಖಾತೆ ತೆರೆಯಲು ಮುಗಿ ಬೀಳುತ್ತಿರುವ ನಗರದ ಜನ

IPPB
Published on

ಬೆಂಗಳೂರು: ಸರಕಾರಿ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಜಿಪಿಒ ಅಂಚೆ ಪ್ರಧಾನ ಕಚೇರಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಖಾತೆ ತೆರೆಯಲು ನಗರದ ಜನರು ಮುಗಿ ಬೀಳುತ್ತಿದ್ದು, ಶುಕ್ರವಾರ ನೂರಾರು ಮಹಿಳೆಯರು ಖಾತೆ ಮಾಡಿಸಿದರು.

ಈ ಹಿಂದೆ ಕೇಂದ್ರದಲ್ಲಿ ’ಐಎನ್‌ಡಿಐಎ’ (ಇಂಡಿಯಾ) ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಮಾಸಿಕ 8,500 ರೂ. ನೀಡಲಾಗುವುದು ಎಂದು ಎಐಸಿಸಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಫಲಿತಾಂಶಕ್ಕೂ ಮೊದಲೇ ಸಾವಿರಾರು ಮಂದಿ ಅಂಚೆ ಇಲಾಖೆ ಬಳಿ ಸಾಲು ನಿಂತು ಖಾತೆ ತೆರೆದಿದ್ದರು. ಇದೀಗ ಮತ್ತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಐಪಿಪಿಬಿ ಖಾತೆ ತೆರೆಯಲು ಜನ ಮುಗಿ ಬೀಳುತ್ತಿದ್ದಾರೆ.

ಇದಕ್ಕಾಗಿ ಜಿಪಿಒ ಅಂಚೆ ಅಧಿಕಾರಿಗಳು ಹೆಚ್ಚುವರಿಯಾಗಿ ನಾಲ್ಕು ಕೌಂಟರ್‌ಗಳನ್ನು ತೆರೆದಿದೆ. ಇದಕ್ಕಾಗಿ ಅಧಾರ್ ಕಾರ್ಡ್ ಪ್ರತಿಯೊಂದಿಗೆ 200 ರೂ.ಗಳ ಠೇವಣಿಯ ಖಾತೆ ತೆರೆಯಲಾಗುತ್ತಿದೆ. ಶುಕ್ರವಾರ ಒಂದೇ ದಿನ ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದರು ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಅಂಚೆ ಖಾತೆ ತೆರೆಯುವುದರಿಂದ ಗ್ರಾಹಕರಿಗೆ ಸಾಕಷ್ಟು ಅನುಕೂಲಗಳಿವೆ. ಪಿಂಚಣಿ ಹಣಕ್ಕಾಗಿ, ಸರಕಾರದ ನಾನಾ ಯೋಜನೆಗಳ ಹಣ ಪಡೆಯಲು ಕೂಡ ಇದು ನೆರವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net