

ವಿಜಯವಾಣಿ ಸುದ್ದಿಜಾಲ ಉಡುಪಿ: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ವಿಪುಲ ಅವಕಾಶವಿದ್ದು, ಕಲಿಕೆಯೊಂದಿಗೆ ವೃತ್ತಿಪರ ಜ್ಞಾನ ಗಳಿಸುವತ್ತ ವಾಣಿಜ್ಯ ಪದವೀಧರರು ಆದ್ಯತೆ ನೀಡುವಂತಾಗಬೇಕು ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಷನ್ನ ಕಾರ್ಯದರ್ಶಿ ಸಿಎ ಬಿ.ಪಿ. ವರದರಾಯ್ ಪೈ ಸಲಹೆ ನೀಡಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ವಾಣಿಜ್ಯ ವಿಭಾಗ ಗುರುವಾರ ಆಯೋಜಿಸಿದ್ದ ಎರಡು ದಿನಗಳ ಸುಸ್ಥಿರ ಜಾಗತಿಕ ವ್ಯಾಪಾರ ಅಭಿವೃದ್ಧಿ: ಅಡೆತಡೆಗಳ ನಿಯಂತ್ರಿಸುವಿಕೆ ಮತ್ತು ಬದಲಾವಣೆಯಲ್ಲಿ ಸಶಕ್ತೀಕರಣ ಎಂಬ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕೈಗಾರಿಕಾ ಕ್ಷೇತ್ರಗಳು ವಾಣಿಜ್ಯಾಭಿವೃದ್ಧಿ ಹೊಂದುವಂತಾಗಲು ವಿಸ್ತೃತ ಹಾಗೂ ದೂರದೃಷ್ಟಿತ್ವದ ಯೋಜನೆ ರೂಪಿಸಬೇಕಾಗುತ್ತದೆ. ಇದರಿಂದ ತಲೆಮಾರುಗಳಿಗೆ ಅಭಿವೃದ್ಧಿ ಕಾಣಲು ಸಾಧ್ಯ. ಇದಕ್ಕೆ ಟಾಟಾ ಮತ್ತು ಬಿರ್ಲಾ ಹಾಗೂ ರಿಲಾಯನ್ಸ್ನಂತ ದಿಗ್ಗಜ ಕಂಪನಿಗಳೇ ಪ್ರತ್ಯಕ್ಷ ನಿದರ್ಶನವಾಗಿದೆ ಎಂದರು.
ಮಲೇಷಿಯಾದ ಏಸಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನ ಉಪನ್ಯಾಸಕ ಡಾ. ಶರಣಕುಮಾರ್ ಶೆಟ್ಟಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ, ವಿಷಯ ಉಪನ್ಯಾಸ ನೀಡುವವರಿಗೆ ಹಾಗೂ ಪ್ರಬಂಧ ಮಂಡಿಸುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾಲೇಜಿನ ವಿದ್ಯಾರ್ಥಿನಿಯರ ತಂಡದಿಂದ ಭರತನಾಟ್ಯ, ಮೋಹಿನಿ ಆಟ್ಟಂ, ಓಡಿಶಿ, ಕಥಕ್ ಹಾಗೂ ಯಕ್ಷಗಾನ ಸೇರಿ ಸಾಂಪ್ರದಾಯಿಕ ಪಂಚಕಲೆಗಳ ನೃತ್ಯದ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.
ಪ್ರೊ. ವನಿತಾ ಮಯ್ಯ ಸ್ವಾಗತಿಸಿದರು. ಡಾ. ಮಲ್ಲಿಕಾ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಚಾಲಕಿ ಪ್ರೊ. ಶೈಲಜಾ ಎಚ್. ಉಪಸ್ಥಿತರಿದ್ದರು. ಉಪನ್ಯಾಸಕ ಅನಿಲಕುಮಾರ್ ವಂದಿಸಿದರು. ಉಪನ್ಯಾಸಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ವಾಣಿಜಯಶಾಸ್ತ್ರ ವಿಭಾಗದ ಡೀನ್ ಪ್ರೊ. ಡಾ. ಈಶ್ವರ್ ಮಾತನಾಡಿ, ಸುಸ್ಥಿರತೆ ಮತ್ತು ಜಾಗತಿಕ ವಾಣಿಜ್ಯ ಅಭಿವೃದ್ಧಿ ಒಟ್ಟಿಗೇ ಸಾಗುವುದು ಅಸಾಧ್ಯ. ಪ್ರಸ್ತುತ ಕೈಗಾರಿಕಾ ಕ್ರಾಂತಿ 4.0 ಇದ್ದು, ಇದರ ಉನ್ನತಿಗಾಗಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ದತ್ತಾಂಶ, ಯಂತ್ರ-ತಾಂತ್ರಿಕತೆ ಅಳವಡಿಕೆ ಹಾಗೂ ಕೃತಕ ಬುದ್ಧಿಮತ್ತೆ ಅಳವಡಿಸಿಕೊಳ್ಳಬೇಕಿದೆ. ಇದರೊಟ್ಟಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ನಿವಾರಣಾ ಕ್ರಮ ಕೈಗೊಂಡಲ್ಲಿ ಸುಸ್ಥಿರತೆ ಹಾಗೂ ಜಾಗತಿಕ ವಾಣಿಜ್ಯ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂದರು.
ಹೆಚ್ಚುತ್ತಿರುವ ಕೈಗಾರಿಕೆಗಳಿಂದ ನೀರು, ಗಾಳಿ ಕಲುಷಿತಗೊಳ್ಳುತ್ತಿವೆ. ಪ್ರಕೃತಿಯ ರಕ್ಷಣೆಗಾಗಿ ಪ್ಲಾಸ್ಟಿಕ್ಮುಕ್ತ ಉತ್ಪನ್ನ ನೀಡಲು ಕೈಗಾರಿಕೆಗಳು ಆದ್ಯತೆ ನೀಡುವಂತಾಗಬೇಕು. ಯಾವುದೇ ಕಾರಣಕ್ಕೂ ಕೃಷಿ ಪೂರಕ ಕೈಗಾರಿಕೆಗಳ ನಿರ್ಲಕ್ಷ್ಯ ಸಲ್ಲದು. ಪ್ರೊ. ಲಕ್ಷ್ಮೀನಾರಾಯಣ ಕಾರಂತ. ಪ್ರಾಂಶುಪಾಲ. ಎಂಜಿಎಂ ಕಾಲೇಜ್, ಉಡುಪಿ