

ಬೆಂಗಳೂರು: ಮನೆ ವಿನ್ಯಾಸ ಎಂದಮೇಲೆ ತಳಪಾಯದಿಂದ ಹಿಡಿದು ಪ್ರತಿಯೊಂದು ಅಂಶವೂ ಪ್ರಾಮುಖ್ಯತೆ ಪಡೆದುಕೊಂಡಿರುತ್ತದೆ. ಅದು ಅಡುಗೆ ಕೋಣೆಯಾಗಿರಲಿ, ಸ್ನಾನದ ಕೋಣೆಯಾಗಿರಲಿ ಪ್ರತಿಯೊಂದು ವಿಚಾರದಲ್ಲೂ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ನಾನಗೃಹಗಳಿಗೂ ಹೊಸ ಹೊಸ ವಿನ್ಯಾಸಗಳು ಸ್ಪರ್ಧೆಯೊಡ್ಡುತ್ತಿವೆ.
ಸ್ನಾನದ ಕೋಣೆ ಎನ್ನುವುದು ಈಗ ಸಾಮಾನ್ಯ ಸಂಗತಿಯಾಗಿ ಉಳಿದಿಲ್ಲ. ಅಡುಗೆ ಕೋಣೆ, ಮಲಗುವ ಕೋಣೆಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಇದಕ್ಕೂ ನೀಡಲಾಗುತ್ತಿದೆ. ಮೈ-ಮನಸ್ಸಿನ ಕೊಳೆಯನ್ನು ತೊಳೆದು ಹಗುರಾಗುವ ಈ ಜಾಗ ಹೆಚ್ಚು ಅನುಕೂಲಕರವಾಗಿ ಇರಬೇಕು. ಒಂದು ಚಪ್ಪಡಿ ಕಲ್ಲಿನ ಹಾಸು, ನೀರು ತುಂಬಲು ಒಂದು ತೊಟ್ಟಿ, ನೀರು ಬಿಸಿ ಮಾಡಲು ಒಂದು ಹಂಡೆ ಒಲೆ ಇದ್ದರೆ ಅದು ಸ್ನಾನದ ಗೃಹ ಎಂಬುದು ಹಳೇ ಕಾಲದ ಮಾತು. ಆದರೆ ಈಗ ಹಾಗಲ್ಲ. ಸ್ನಾನದ ಕೋಣೆಗೂ ಆಕರ್ಷಕ ಟೈಲ್ಸ್, ನೆಲಹಾಸುಗಳು ಬಂದಿವೆ. ಶವರ್, ಬಾತ್ ಟಬ್‌ಗಳ ವಿನ್ಯಾಸಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು. ಕೊಳಾಯಿಗಳಲ್ಲೂ ಬಹು ಆಯ್ಕೆಗಳಿವೆ.
ವಾಸ್ತು ಇದೆ:
ಸ್ನಾನಗೃಹ ಕೇವಲ ವಿನ್ಯಾಸದಿಂದ ಮಾತ್ರವಲ್ಲ, ವಾಸ್ತುವಿನಿಂದಲೂ ಕೂಡಿರಬೇಕು. ಈ ನಿಟ್ಟಿನಲ್ಲಿ ವಾಸ್ತುತಜ್ಞರು ಹಲವು ಸೂತ್ರಗಳನ್ನು ರೂಪಿಸಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸ್ನಾನಗೃಹ ಹಾಗೂ ಶೌಚಗೃಹ ಎರಡೂ ಒಟ್ಟಿಗೆ ಇರುತ್ತವೆ. ಹಾಗಾಗಿ ಸ್ನಾನದ ಗೃಹ ಇಂತಹದ್ದೇ ದಿಕ್ಕಿನಲ್ಲಿ ಇರಬೇಕು ಎಂಬ ನಿಯಮವಿದೆ. ಏಕೆಂದರೆ ಸ್ನಾನದ ಕೋಣೆ ಸರಿಯಾದ ಜಾಗದಲ್ಲಿ ನಿರ್ಮಿಸದಿದ್ದರೆ ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ ಎಂಬುದು ತಜ್ಞರ ಅಭಿಮತ. ಹಾಗಾಗಿ ಈ ಗೋಡೆಗೆ ಹೊಂದಿಕೊಂಡು ಅಡುಗೆ ಮನೆ, ದೇವರ ಮನೆ ಇರಬಾರದು. ಅದನ್ನು ದೇವ ಮೂಲೆಯಲ್ಲಿ ನಿರ್ಮಿಸಬಾರದು. ವಾಯವ್ಯ ಅಥವಾ ಉತ್ತರದಲ್ಲಿ ಇರುವ ಸ್ನಾನದ ಕೋಣೆ, ಹಣಕಾಸು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಲ ನೀಡುತ್ತದೆ. ಹಾಗೆಯೇ ದಕ್ಷಿಣ ಮತ್ತು ಆಗ್ನೇಯ ದಿಕ್ಕುಗಳಲ್ಲಿನ ಸ್ನಾನದ ಕೋಣೆ ವಿರುದ್ಧದ ಲಗಳನ್ನು ನೀಡುತ್ತದಂತೆ. ನೈಋತ್ಯ ದಿಕ್ಕಿನಲ್ಲಿಯೂ ಸ್ನಾನದ ಕೋಣೆ ಬೇಡ ಎನ್ನುತ್ತಾರೆ ವಾಸ್ತು ತಜ್ಞರು. ಇಂತಹ ಸ್ನಾನದ ಕೋಣೆಗಳು ನಕಾರಾತ್ಮಕ ಶಕ್ತಿಗಳ ಪ್ರವೇಶಕ್ಕೆ ದಾರಿ ಮಾಡಿ ಕೊಡುತ್ತವಂತೆ.
ಅಗತ್ಯಕ್ಕೆ ತಕ್ಕಂತೆ ಇರಲಿ:
ಬಚ್ಚಲುಮನೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇರಬೇಕು. ಇನ್ನು ವಾಷಿಂಗ್ ಮಷಿನ್‌ಗೂ ಅಲ್ಲಿಯೇ ಜಾಗ ಕಲ್ಪಿಸುವುದಾದರೆ ಅದಕ್ಕೆ ವಾಯವ್ಯ ಅಥವಾ ಆಗ್ನೇಯ ದಿಕ್ಕನ್ನು ಬಳಸಿಕೊಳ್ಳಬಹುದು. ಹಾಗೆಯೇ ಸ್ನಾನದ ಕೋಣೆಗಳಲ್ಲಿನ ಕನ್ನಡಿಯನ್ನು ಪೂರ್ವ, ಇಲ್ಲವೆ ಉತ್ತರದ ಗೋಡೆಗಳಿಗೆ ತೂಗುಹಾಕಬಹುದು. ಇತ್ತೀಚಿನ ದಿನಗಳಲ್ಲಿ ಮಲಗುವ ಕೋಣೆ ಜತೆಗೆ ಸ್ನಾನದ ಗೃಹ ಇರುತ್ತದೆ. ಆದರೆ ಅದು ಅಗತ್ಯಕ್ಕಿಂತ ಜಾಸ್ತಿ ಇರಬಾರದು. ಬಚ್ಚಲು ಮನೆ ಸಂಖ್ಯೆ ಹೆಚ್ಚಾದರೆ ಅದರ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಸ್ನಾನದ ಗೃಹ ನಿರ್ಮಾಣ ಮಾಡುವಾಗ ವಿನ್ಯಾಸ ಹಾಗೂ ಅಳವಡಿಸುವ ಪರಿಕರಗಳ ಜೊತೆಗೆ ಹೆಚ್ಚು ಗಾಳಿ- ಬೆಳಕು ಬೀಳುವ ಬಗ್ಗೆಯೂ ಗಮನ ಹರಿಸಬೇಕು. ಇಲ್ಲವಾದರೆ ದುರ್ವಾಸನೆ ಜೊತೆಗೆ ಕ್ರಿಮಿಕೀಟಗಳಿಗೆ ಅವಕಾಶ ಮಾಡಿಕೊಡುತ್ತದೆ. ಸದಾ ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೂ ಒಳ್ಳೆಯದು.