ತಲೆ ಎತ್ತಲಿದೆ ಅಂತಾರಾಜ್ಯ ಸಂಪರ್ಕ ಸೇತು

sul_bridge
Published on

ಸುಳ್ಯ: ಆಲೆಟ್ಟಿ- ಕೋಲ್ಚಾರು- ಕಣಕ್ಕೂರು- ಬಂದಡ್ಕ ಅಂತಾರಾಜ್ಯ ರಸ್ತೆಯ ಬಾರ್ಪಣೆ ಎಂಬಲ್ಲಿ ಕಿರಿದಾದ ಹಳೇ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಒಂದು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದ್ದು ತಳಪಾಯ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಬಾರ್ಪಣೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಲ್ಲಿ 91 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ಮಾರ್ಚ್ ಕೊನೆಗೆ ಸೇತುವೆ ಕಾಮಗಾರಿ ಮುಗಿಸಿ ಸಂಚಾರಕ್ಕೆ ತೆರೆದುಕೊಳ್ಳುವ ಯೋಜನೆ ರೂಪಿಸಲಾಗಿದೆ.

19 ಮೀಟರ್ ಉದ್ದದ ಸೇತುವೆ: 19.34 ಮೀಟರ್ ಉದ್ದ, 10 ಮೀ. ಕ್ಯಾರಿಯೇಜ್ ವೇ ಅಗಲದ ಸೇತುವೆ ನಿರ್ಮಾಣಗೊಳ್ಳಲಿದೆ. 8.42 ಮೀಟರ್ ಅಗಲದ ಎರಡು ಅಂಕಣಗಳು, ಎರಡು ಅಬಾಟ್‌ಮೆಂಟ್, ಎರಡು ವೃತ್ತಾಕಾರದ ಪಿಲ್ಲರ್‌ಗಳು ಇರುವ ರ‌್ಯಾಪ್ ಫೌಂಡನ್ ಒಳಗೊಂಡಂತೆ ಆರ್‌ಸಿಸಿ ಸೇತುವೆ ನಿರ್ಮಾಣವಾಗಲಿದೆ ಎಂದು ಸುಳ್ಯ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇಗೌಡ ತಿಳಿಸಿದ್ದಾರೆ.

 ಸಂಚಾರಕ್ಕೆ ಬದಲಿ ರಸ್ತೆ: ಕಾಮಗಾರಿ ನಡೆಯುತ್ತಿರುವ ನಿಟ್ಟಿನಲ್ಲಿ ಮಾರ್ಚ್ 31ರವರೆಗೆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ನಡೆಸಲಾಗುತ್ತಿದೆ. ಸೇತುವೆಯ ಎರಡೂ ಬದಿ ತೆಂಗು, ಅಡಕೆ ತೋಟವಿರುವ ಕಾರಣ ಬದಲಿ ರಸ್ತೆ ನಿರ್ಮಿಸಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಸುಳ್ಯ- ಬಂದಡ್ಕ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ರಸ್ತೆಗಳನ್ನು ಸೂಚಿಸಲಾಗಿದೆ. ಬಂದಡ್ಕದಿಂದ ಸುಳ್ಯಕ್ಕೆ ಬರುವ ವಾಹನಗಳು ಕೊಲ್ಲರಮೂಲೆ- ಕರ್ಲಪ್ಪಾಡಿ ದ್ವಾರ- ಕಾಂತಮಂಗಲ ಸೇತುವೆ ಮೂಲಕ ಹಾಗೂ ಸುಳ್ಯದಿಂದ ಬಂದಡ್ಕಕ್ಕೆ ಹೋಗುವ ವಾಹನಗಳು ಕಾಂತಮಂಗಲ ಸೇತುವೆ- ಕರ್ಲಪ್ಪಾಡಿ ದ್ವಾರ- ಕೊಲ್ಲರಮೂಲೆ ಮೂಲಕ ಸಂಚರಿಸಲಾಗುತ್ತಿದೆ. ಸೇತುವೆ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳದ ಮೇಲ್ಭಾಗದಲ್ಲಿ ಜನರಿಗೆ ನಡೆದಾಡಲು ಒಂದು ತಾತ್ಕಾಲಿಕ ಕಾಲು ಸೇತುವೆಯನ್ನೂ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net