

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಮುಂಗಾರು ಪೂರ್ವ ಮಳೆಯ ಅಬ್ಬರ ಎಲ್ಲೆಡೆ ಜೋರಾಗಿದ್ದು, ಜೀವನದಿ ತುಂಗಭದ್ರಾದಲ್ಲಿ ಒಳಹರಿವು ಹೆಚ್ಚಿಸಿದೆ. ಟಿಬಿ ಡ್ಯಾಂಗೆ ಒಳಹರಿವು ಹೆಚ್ಚಳವಾಗುವ ಮೂಲಕ ರೈತರಲ್ಲಿ ಪ್ರಸಕ್ತ ಹಂಗಾಮಿಗೆ ಸಮರ್ಪಕ ನೀರು ದೊರೆಯುವ ಆಸೆ ಮೂಡಿಸಿದೆ.
ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಭದ್ರಾ ಜಲಾಶಯದಿಂದಲೂ ತುಂಗಭದ್ರಾ ಜಲಾಶಯಕ್ಕೆ ನೀರು ಬಿಡಲಾಗಿದೆ. 331 ರಿಂದ 372 ಕ್ಯೂಸೆಕ್‌ಗಿಂತ ಕಡಿಮೆ ಇದ್ದ ಒಳ ಹರಿವು ಬುಧವಾರ ದ್ವಿಗುಣಗೊಂಡಿದೆ. ತುಂಗಭದ್ರಾ ಆಡಳಿತ ಮಂಡಳಿ ನೀಡಿದ ಮಾಹಿತಿ ಪ್ರಕಾರ 9378 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಒಂದೇ ದಿನಕ್ಕೆ ಒಂದು ಟಿಎಂಸಿಗೂ ಹೆಚ್ಚು ನೀರು ಜಲಾಶಯಕ್ಕೆ ಬಂದಿದ್ದು ಅಚ್ಚುಕಟ್ಟು ಪ್ರದೇಶದ ರೆತರ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದ ಬಾರಿ ಟಿಬಿ ಜಲಾಶಯದ 19 ನೇ ಗೇಟ್ ಕಿತ್ತಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಫೋಲಾಗಿತ್ತು. ಇದರಿಂದ ಜಲಾಶಯದಲ್ಲಿ ಸಂಪೂರ್ಣ ಒಳಹರಿವು ಕಡಿಮೆಯಾಯಿತು.ಬೇಸಿಗೆಯಲ್ಲಿ ರೈತರ ಜಮೀನುಗಳಿಗೆ ನೀರು ದೊರೆದಿದ್ದರಿಂದ ಭತ್ತ ಬೆಳೆಯಲು ಕಷ್ಟವಾಗಿದ್ದರಿಂದ ರೈತರು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದರು. ಆದರೆ ಇದೀಗ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮತ್ತೆ ಒಳ ಹರಿವಿನ ಪ್ರಮಾಣದಲ್ಲಿ ಬರಪೂರ ಏರಿಕೆ ಕಂಡುಬಂದಿದ್ದರಿಂದ ಕೃಷಿ ಚಟುವಟಿಕೆಯಲ್ಲಿ ರೈತರು ಮುಂದಾಗಿದ್ದಾರೆ.
ರೈತರಲ್ಲಿ ಹೆಚ್ಚಿದ ಸಂತೋಷ
ಜಲಾಶಯಕ್ಕೆ ಒಳ ಹೆಚ್ಚಿರುವುದರಿಂದ ರಾಯಚೂರು ಸೇರಿದಂತೆ ವಿಜಯನಗರ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ರೈತರಲ್ಲಿ ಖುಷಿ ಹೆಚ್ಚಿದೆ. ಈ ಭಾರಿ ಕೂಡ ತುಂಗಭದ್ರಾ ಜಲಾಶಯ ಭರ್ತಿಯಾದಲ್ಲಿ ಎರಡು ಬೆಳೆಗಳಿಗೆ ಸಮರ್ಪಕವಾಗಿ ನೀರು ಸಿಗುಬಹುದು ಎಂಬ ಭರವಸೆ ಮೂಡಿದೆ. ಬೇಸಿಗೆಯಲ್ಲಿ ಹಿಂಗಾರು ಕೈಕೊಟ್ಟಿರುವುದರಿಂದ ಮುಂಗಾರಿನಲ್ಲಿ ಉತ್ತಮ ಬೆಳೆ ಬೆಳೆಯಹುದು ಎಂದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಖುಷಿ ಹೆಚ್ಚಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಜಲಾಶಯದ ಮಾಹಿತಿ
ವರ್ಷದಲ್ಲಿ 10 ವರ್ಷದಲ್ಲಿ ಜಲಾಶಯದ ಒಳ ಹರಿವು ಕೇವಲ 7788 ಕ್ಯೂಸೆಕ್ ಮಾತ್ರ ಹರಿಯುತಿತ್ತು. ಆದರೆ ಈ ಬಾರಿ ಬುಧವಾರದ ದಾಖಲಾದಂತೆ ಜಲಾಶಯದ ನೀರಿನ ಗರಿಷ್ಠ 1633 ಅಡಿ ಪೈಕಿ 1578.92 ಅಡಿ ನೀರು ಸಂಗ್ರಹವಾಗಿದೆ. ಒಳಹರಿವು 9378 ಕ್ಯೂಸೆಕ್ ಇದ್ದು, 9.379 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ ಇದೇ ದಿನಕ್ಕೆ ಜಲಾಶಯದಲ್ಲಿ ಯಾವುದೇ ಒಳ ಹರಿವು ಇಲ್ಲದೆ ಕೇವಲ 3.384 ಟಿಎಂಸಿ ಮಾತ್ರ ನೀರು ಸಂಗ್ರವಾಗಿತ್ತು. ಮಲೆನಾಡಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ ಎಂಬ ನಿರೀಕ್ಷೆ ರೈತರಲ್ಲಿದೆ.
ಕಳೆದ 10 ವರ್ಷದಲ್ಲಿ ಇದೆ ಮೊದಲ ಬಾರಿಗೆ ಜಲಾಶಯದಲ್ಲಿ ಜಲಾಶಯದ ಒಳ ಹರಿವು 9378 ಕ್ಯೂಸೆಕ್ ನೀರು ಇರುವುದು ಖುಷಿಯ ವಿಚಾರವಾಗಿದೆ. ಜತೆಗೆ ಸಧ್ಯದಲ್ಲಿ ಜಲಾಶಯವು ಭರ್ತಿಯಾಗಲಿದೆ. ಆದರೆ ಆಕ್ರಮ ನೀರಾವರಿ ತಡೆದರೆ ಮಾತ್ರ ಕೆಳ ಭಾಗದ ರೈತರಿಗೆ ನೀರು ದೊರೆಯುತ್ತದೆ. ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕಾಗಿದೆ.
ಚಾಮರಸ್ ಮಾಲೀ ಪಾಟೀಲ್ ರಾಜ್ಯ ಗೌರವಾಧ್ಯಕ್ಷ ರೈತ ಸಂಘ ರಾಯಚೂರು.