

ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಗುಡ್ಫ್ರೖೆಡೇ ಹಾಗೂ ಈಸ್ಟರ್ ಹಬ್ಬವನ್ನು ಮನೆಯಲ್ಲಿಯೇ ಆಚರಿಸುವಂತೆ ಕ್ರೈಸ್ತ ಸಮುದಾಯಕ್ಕೆ ಆರ್ಚ್ ಬಿಷಪ್ ಡಾ. ಪೀಟರ್ ಮಾಚಾಡೊ ಮನವಿ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೋಮವಾರ ರಾತ್ರಿ ಜಯಮಹಲ್ನ ನಿವಾಸದಲ್ಲಿ ಆರ್ಚ್ ಬಿಷಪ್ ಅವರನ್ನು ಭೇಟಿ ಮಾಡಿ, ಗುಡ್ಫ್ರೈಡೇ ದಿನ ಚರ್ಚ್ಗಳ ಬಾಗಿಲು ತೆರೆಯದಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿರುವ ಬಿಷಪ್, ಹಬ್ಬದಂದು ರಾಜ್ಯದ ಯಾವುದೇ ಭಾಗದಲ್ಲಿರುವ ಚರ್ಚ್ ತೆರೆಯುವುದಿಲ್ಲ. ಮನೆಯಲ್ಲಿಯೇ ಹಬ್ಬ ಆಚರಿಸುವಂತೆ ಸಮುದಾಯದ ಜನರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಚರ್ಚ್ಗಳ ಬಾಗಿಲು ತೆರೆದರೆ ಹೆಚ್ಚು ಜನರು ಸೇರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಚರ್ಚ್ಗಳ ಬಾಗಿಲು ತೆರೆಯುವುದಿಲ್ಲ. ಹಬ್ಬ ಆಚರಣೆ ವಿಧಾನವನ್ನು ಆನ್ಲೈನ್ ಜಾಲತಾಣಗಳಲ್ಲಿ (ಯೂ ಟ್ಯೂಬ್) ಪ್ರಸಾರ ಮಾಡಲಾಗುವುದು. ಹೀಗಾಗಿ, ಅದನ್ನು ವೀಕ್ಷಿಸಿ ಮನೆಯಲ್ಲಿಯೇ ಮನೆ ಮಂದಿ ಸೇರಿ ಹಬ್ಬ ಆಚರಿಸುವಂತೆ ಬಿಷಪ್ ಕೋರಿದ್ದಾರೆ.
ಈಸ್ಟರ್ ಹಾಗೂ ಗುಡ್ಫ್ರೈಡೇಗೆ ಸಂಬಂಧಿಸಿದಂತೆ ಬಿಷಪ್ ಭಾಷಣವನ್ನು ಆನ್ಲೈನ್ನಲ್ಲೇ ಅಪ್ಲೋಡ್ ಮಾಡುವುದಾಗಿ ತಿಳಿಸಿದ್ದಾರೆ. ಗುಡ್ಫ್ರೈಡೇ ದಿನದಂದು ಯಾರೂ ಚರ್ಚ್ಗೆ ಬರುವುದು ಬೇಡ ಎಂದು ಹೇಳಿದ್ದಾರೆ. ಈಗಾಗಲೇ ಕ್ರೈಸ್ಥ ಬಾಂಧವರಲ್ಲಿ ಮನೆಯಲ್ಲಿಯೇ ಹಬ್ಬ ಆಚರಿಸುವಂತೆ ಮನವಿ ಮಾಡಲಾಗಿದೆ.
| ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ