

ಹೊಸಪೇಟೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 18 ವರ್ಷಗಳ ಕನಸು ನನಸಾದ ಹಿನ್ನೆಲೆ ಸ್ಮಾರಕಗಳ ನಗರಿಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಆರ್.ಸಿ.ಬಿ. ಗೆಲ್ಲುತ್ತಿದ್ದಂತೆ ನಗರದ ಪುನೀತ್ ರಾಜಕುಮಾರ್ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಎದುರಿಸಿ ಗೆಲವು ಕಂಡಿದೆ. ಬರೋಬ್ಬರಿ 18 ವರ್ಷಗಳ ಬಳಿಕ ಟ್ರೋಫಿಯ ಕನಸು ನನಸಾಗಿದೆ. ರಸ್ತೆಗಳಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಆರ್‌ಸಿಬಿ ಅಭಿಮಾನಕ್ಕೆ ಪಾರವೇ ಇರಲಿಲ್ಲ. ಮಹಿಳೆಯರು.. ಯುವಕ.. ಯುವತಿಯರು.. ಮಕ್ಕಳ ಸಮೇತ ಎಲ್ಲರೂ ರಸ್ತೆ ಮಧ್ಯೆ ಕುಣಿದು ಕುಪ್ಪಳಿಸಿದರು. ನಗರದ ಪುನೀತ್ ರಾಜಕುಮಾರ ವೃತ್ತದಲ್ಲಿ ಸಂಭ್ರಮದ ಜತೆ ಪಟಾಕಿ ಸದ್ದು ಜೋರಾಗಿತ್ತು. ಒಟ್ಟಾರೆ ಆರ್‌ಸಿಬಿ ಆರ್‌ಸಿಬಿ ಅನ್ನೋ ಘೋಷವಾಕ್ಯ ನಗರ ಮಾತ್ರವಲ್ಲದೇ ಜಿಲ್ಲೆಯಲ್ಲಿ ಮೊಳಗಿತ್ತು.
ನಗರದ ಕೆಲ ಹೊಟೇಲ್ ಗಳಲ್ಲಿ ಫೈನಲ್ ಪಂದ್ಯದ ನೇರಪ್ರಸಾರ ವೀಕ್ಷಿಸಲು ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಅತ್ತ ಆರ್.ಸಿ.ಬಿ. ಬ್ಯಾಟಿಂಗ್ ಮಾಡುವಾಗ ಫೋರ್, ಸಿಕ್ಸರ್ ಬೀಳುತ್ತಿದ್ದಂತೆ ಇತ್ತ ಅಭಿಮಾನಿಗಳ ಚಿತ್ಕಾರ ಮುಗಿಲು ಮುಟ್ಟುತ್ತಿತ್ತು. ಬಳಿಕ ಪಂಜಾಬ್ ತಂಡ ಬ್ಯಾಟಿಂಗ್ ಮಾಡುವಾಗ ಅವರ ಒಂದೊAದು ವಿಕೆಟ್ ಉರುಳುತ್ತಿದ್ದಂತೆ ಆರ್.ಸಿ.ಬಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಾಗಿದೆ. ಪಂದ್ಯವು ರೋಚಕತೆಯಿಂದ ಸಾಗುತ್ತಿತ್ತು, ಅಂತಿಮವಾಗಿ 6 ರನ್‌ಗಳಿಂದ ಆರ್.ಸಿ.ಬಿ. ಗೆಲ್ಲುತ್ತಿದ್ದಂತೆ ಪುನೀತ್ ರಾಜಕುಮಾರ್ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಅಭಿಮಾನಿಗಳು ಅದ್ಧೂರಿ ವಿಜಯೋತ್ಸವ ಆಚರಿಸಿದರು. ಸತತ ಎರಡು ಗಂಟೆಗೂ ಅಧಿಕ ಕಾಲ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಕನ್ನಡ ಬಾವುಟ ಹಿಡಿದು, ಬಾನೆತ್ತರದಲ್ಲಿ ಸಿಡಿಮದ್ದುಗಳನ್ನು ಹಾರಿಸಿ ಸಂಭ್ರಮಿಸಿದ್ದು ಕರ್ನಾಟಕ ರಾಜ್ಯೋತ್ಸವ ನೆನಪಿಸಿತು. ಚಿಕ್ಕ ಮಕ್ಕಳು, ಯುವಕ-ಯುವತಿಯರಿಂದ ಮಧ್ಯರಾತ್ರಿ 12.30ರ ನಂತರವೂ ಸಂಭ್ರಮಾಚರಣೆ ಮುಂದುವರಿದಿತ್ತು. ಈ ಬಾರಿ ಫೈನಲ್ ಗೆದ್ದು ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ವಿವಿಧ ದೇಗುಲಗಳಲ್ಲಿ ಸಲ್ಲಿಸಿದ ವಿಶೇಷ ಪೂಜೆ ಫಲಿಸಿದೆ.