ಹನಿಟ್ರ್ಯಾಪ್​: ದಲಿತ ಸೇನೆಯ ಯಳಸಂಗಿ ಗ್ಯಾಂಗ್ ಅರೆಸ್ಟ್​

dalit sene
Published on

ಕಲಬುರಗಿ: ಅತ್ಯಾಚಾರ, ಉದ್ಯಮಿ, ಅಧಿಕಾರಿಗಳಿಗೆ ಹನಿಟ್ರ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಸೇರಿ ಆತನ ಆರು ಸಹಚರರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಹಣಮಂತ ಯಳಸಂಗಿ ಸೇರಿ ಶ್ರೀಕಾಂತ ರೆಡ್ಡಿ, ಮಂಜುನಾಥ ಭಂಡಾರಿ, ಉದಕುಮಾರ ಖಣಗೆ, ಅರವಿಂದ ಕಮಲಾಪುರ, ಸಂತೋಷ ಪಾಳಾನನ್ನು ಬಂಧಿಸಿ, ವೈದ್ಯಕೀಯ ತಪಾಸಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು ಲೇಂಗಟಿ, ಪ್ರಭು ಹಿರೇಮಠನನ್ನು ಕಳೆದ ಎರಡು ದಿನ ಹಿಂದೆಯೇ ಬಂಧಿಸಲಾಗಿತ್ತು.
ಅಶ್ಲೀಲ ಫೋಟೋ ಹಂಚಿಕೆ ಕೇಸ್: ಅತ್ಯಾಚಾರ, ಹನಿಟ್ರ್ಯಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಮಂತ ಯಳಸಂಗಿ ಗ್ಯಾಂಗ್ ವಿರುದ್ಧ ಇದೀಗ ಐಟಿ ಆ್ಯಕ್ಟ್ ಪ್ರಕಾರ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ಹನಿಟ್ರ್ಯಾಪ್ ಬಳಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಹೇಳಿಕೆಯನ್ನು ದಾಖಲಿಸಲಾಗಿದೆ. ಇದರಿಂದ ತನಿಖೆಗೆ ಬಲವಾದ ಸಾಕ್ಷಿ ಲಭ್ಯವಾಗಿದ್ದರಿಂದ ಪೊಲೀಸರು ಆರೋಪಿತರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ವಿಚಾರಣೆ ವೇಳೆಯಲ್ಲಿ ಯಳಸಂಗಿ ಸೇರಿ ಇತರರು ಕೃತ್ಯ ನಡೆಸಿದ್ದು, ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಯಲ್ಲಿ ಸೆನ್ ಪೊಲೀಸರು ಬಂಧಿಸಿದರು.
ಮೂವರು ಸಂತ್ರಸ್ತೆಯರು ದೂರಿದ್ದರು: ದಲಿತ ಸೇನೆಯ ಹಣಮಂತ ಯಳಸಂಗಿ ಮತ್ತು ಸಹಚರರ ವಿರುದ್ಧ ಅಕ್ಕಲಕೋಟ, ಮುಂಬೈ ಮತ್ತು ಡೊಂಗರಾಂವದ ಮಹಿಳೆಯರು ಅತ್ಯಾಚಾರ, ಹನಿಟ್ರ್ಯಾಪ್ ದೂರು ನೀಡಿದ್ದರು. ಯುವತಿಯೊಬ್ಬಳ ಭ್ರೂಣ ಹತ್ಯೆ ಆರೋಪವೂ ಕೇಳಿ ಬಂದಿತ್ತು. ಈ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸಿದ್ದರು.
ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ ಮಾರ್ಗದರ್ಶನದಲ್ಲಿ ಸೆನ್ ಎಸಿಪಿ ಮಡ್ಯಾರಪ್ಪ, ಇನ್‌ಸ್ಪೆಕ್ಟರ್‌ಗಳಾದ ಸೋಮಲಿಂಗ ಕಿರದಳ್ಳಿ, ಶಕೀಲ ಅಂಗಡಿ ಇತರರು ಬಂಧಿಸಿ, ವೈದ್ಯಕೀಯ ಪರೀಕ್ಷೆ ಮಾಡಿಸಿ, ಜೆಸಿಗೆ ಒಪ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net