

ಬೆಂಗಳೂರು: ಕರೊನಾ ಸೋಂಕು ಹರಡುವಿಕೆ ತಡೆಯಲು ವಿವಿಧ ಕೆಟಗರಿಯ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ವೆಂಟಿಲೇಟರ್ಗಳ ಬೇಡಿಕೆಗೆ ಅನುಗುಣವಾಗಿ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ವೈರಸ್ ಹರಡುವಿಕೆ ತಡೆಯಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಕೆಯಾಗಿ ರುವ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, 2.40 ಲಕ್ಷ ಎನ್-95 ಮಾಸ್ಕ್, 6.94 ಲಕ್ಷ ಟ್ರಿಪಲ್ ಲೇಯರ್ ಮಾಸ್ಕ್, 53 ಸಾವಿರ ಪಿಪಿಇ ಕಿಟ್ಗಳು ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಆಂಡ್ ವೇರ್ಹೌಸಿಂಗ್ ಸೊಸೈಟಿಯಲ್ಲಿ ದಾಸ್ತಾನು ಮಾಡಲಾಗಿದೆ. 324 ವೆಂಟಿಲೇಟರ್, 18.33 ಲಕ್ಷ ಎನ್-95 ಮಾಸ್ಕ್, 54 ಲಕ್ಷ ಟ್ರಿಪಲ್ ಲೇಯರ್ ಮಾಸ್ಕ್, 10 ಲಕ್ಷ ಪಿಪಿಇ ಕಿಟ್ಸ್, 25 ಸಾವಿರ ಹ್ಯಾಂಡ್ ಸ್ಯಾನಿಟೈಸರ್ ಬಾಟಲ್ಗಳ ಖರೀದಿಗೆ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಸ್ಪಷ್ಟ ಚಿತ್ರಣ ಕೇಳಿದ ಕೋರ್ಟ್: ಕೋವಿಡ್ ಚಿಕಿತ್ಸೆಗೆ ನಿಗದಿಪಡಿಸಿರುವ ಕಲಬುರಗಿಯ ಇಎಸ್ಐ ಆಸ್ಪತ್ರೆ ಸಿಬ್ಬಂದಿಗೆ ಮಾಸ್ಕ್ಗಳನ್ನೂ ನೀಡಲಾಗಿಲ್ಲ ಎಂದು ಆಸ್ಪತ್ರೆಯ ಡಾ. ಝೀನತ್ ಹೈಕೊರ್ಟ್ಗೆ ಇ-ಮೇಲ್ ಕಳುಹಿಸಿದ್ದಾರೆ. ಮಾಸ್ಕ್, ಗ್ಲೌವ್ಸ್, ಸ್ಯಾನಿಟೈಸರ್ ಒದಗಿಸಿಲ್ಲ ಎಂದು ಬೀದರ್ ಜಿಲ್ಲೆಯ ಚೆಕ್ಪೋಸ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕಿಯರೂ ಇ-ಮೇಲ್ ಮಾಡಿದ್ದಾರೆ. ಹೀಗಿರುವಾಗ ಸರ್ಕಾರ ತನ್ನ ಬಳಿ ಎಷ್ಟು ಲಭ್ಯವಿದೆ, ಎಷ್ಟು ಖರೀದಿಗೆ ಆದೇಶ ಹೊರಡಿಸಲಾಗಿದೆ ಎಂದಷ್ಟೇ ಹೇಳಿದೆ. ಆದರೆ, ಇರುವ ಬೇಡಿಕೆ, ಅದಕ್ಕನುಗುಣವಾಗಿ ಯಾವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲವೆಂದು ಪೀಠ ಬೇಸರ ವ್ಯಕ್ತಪಡಿಸಿತು. ಈ ಬಗ್ಗೆ ಸ್ಪಷ್ಟ ಚಿತ್ರಣ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
2,658 ಐಸೋಲೇಷನ್ ಬೆಡ್ಗಳು: ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಸೇರಿ ಒಟ್ಟು 537 ಐಸೊಲೇಷನ್ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 1,114, ಖಾಸಗಿ ಆಸ್ಪತ್ರೆಗಳಲ್ಲಿ 1,544 ಸೇರಿ ಒಟ್ಟು 2,658 ಐಸೊಲೇಷನ್ ಬೆಡ್ಗಳನ್ನು ಕಾಯ್ದಿರಿಸಲಾಗಿದೆ. ಬೆಂಗಳೂರಿನಲ್ಲೇ 862 ಐಸೊಲೇಷನ್ ಬೆಡ್ಗಳಿವೆ. ವೆಂಟಿಲೇಟರ್ ವ್ಯವಸ್ಥೆ ಹೊಂದಿರುವ 740 ಐಸಿಯು ಬೆಡ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 8 ಜಿಲ್ಲಾ ಲ್ಯಾಬ್ಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ.ಎಂದು ಸರ್ಕಾರ ತಿಳಿಸಿದೆ.