ಒಳ ಮೀಸಲಾತಿ ಜಾರಿಗೆ ಆಗಸ್ಟ್ 15ರ ಗಡವು; ರಾಜ್ಯ ಸರ್ಕಾರಕ್ಕೆ ಡಿ.ಎಸ್.ಮಾಳಗಿ ಎಚ್ಚರಿಕೆ

DS Malagi, 
Published on

ಹಾವೇರಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಶಿಫಾರಸ್ಸಿನಂತೆ ಆಗಸ್ಟ್ 15ರೊಳಗೆ ಮಾದಿಗ ಸಮಾಜಕ್ಕೆ ಶೇ.6ರಷ್ಟು ಒಳ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಲಿಡ್ಕರ್ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಎಚ್ಚರಿಕೆ ನೀಡಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ನೀಡಿರುವ ಶೇ.15ರಷ್ಟು ಮೀಸಲಾತಿಯಲ್ಲಿ 101 ಜಾತಿಗಳ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ, ಸಾಮಾಜಿಕ ಸ್ಥಿತಿಗತಿಯ ಅಧ್ಯಯನ ಮಾಡಲಾಗಿದೆ. ಪರಿಶಿಷ್ಟ ಜಾತಿಯ ಮಾದರ, ಸಮಗಾರ, ಡೋಹರ, ಮಚಗಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರು ಚರಂಡಿ ಸ್ವಚ್ಛತೆ, ಸ್ವಚ್ಛತೆ, ತಮಟೆ ಭಾರಿಸುವುದು, ಇತ್ಯಾದಿ ಕಾಯಕ ಮಾಡುತ್ತಿದ್ದಾರೆ. ಹಾಗಾಗಿ, ಇವರಿಗೆ ಶೇ.6ರಷ್ಟು ಒಳಮೀಸಲಾತಿ ನೀಡುವಂತೆ ಆಯೋಗ ವರದಿ ನೀಡಿತ್ತು ಎಂದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ ಸಚಿವ ಸಂಪುಟದಲ್ಲಿ ನಿರ್ಣಯ ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ನಂತರ ಬಂದ ಕಾಂಗ್ರೆಸ್ ಸರ್ಕಾರ ಸಮಾಜದ ಒತ್ತಡಕ್ಕೆ ಮಣಿದು ಕೇಂದ್ರಕ್ಕೆ ಶಿಫಾರಸ್ಸು ಮಾಡಿತು. ಒಳಮೀಸಲಾತಿ ಜಾರಿ ಮಾಡುವಂತೆ ಕಳೆದ ವರ್ಷ ಆಗಸ್ಟ್ 1ರಂದು ಸುಪ್ರೀಂಕೋರ್ಟ್ ಆದೇಶಿಸಿ ವರ್ಷ ಕಳೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿಗೊಳಿಸದೇ ಸಮಾಜಕ್ಕೆ ಘೋರ ಅನ್ಯಾಯ ಮಾಡಿದ್ದಾರೆ. ಅಹಿಂದ ನಾಯಕರೆಂದು ಹೇಳುವ ಸಿಎಂ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಸಮಾಜದ ಐವರು ಶಾಸಕರು, ಸಚಿವರಾದ ಆರ್.ಬಿ.ತಿಮ್ಮಾಪುರ, ಕೆ.ಎಚ್.ಮುನಿಯಪ್ಪ ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.

ಆಗಸ್ಟ್ 1ರಂದು ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ಆಗಸ್ಟ್ 15ರೊಳಗೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಆದಿಜಾಂಬವ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ, ಉಡಚಪ್ಪ ಮಾಳಗಿ, ಹೊನ್ನಪ್ಪ ತಗಡಿನಮನಿ, ಅಶೋಕ ಮರೆಣ್ಣನವರ, ಮಾಲತೇಶ ಯಲ್ಲಾಪುರ, ಸುಭಾಸ ಬೆಂಗಳೂರ, ಮಲ್ಲೇಶ ಕಡಕೋಳ, ಅಂಕಪ್ಪ ಚಕ್ಕಲಿ, ಮಾರುತಿ ಬಣಕಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net