ಸರ್ಕಾರದಿಂದ ಅನುದಾನದ ದುರ್ಬಳಕೆ; ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಆರೋಪ

Published on

ಹಾವೇರಿ: ಆದಿಜಾಂಬವ, ಭೋವಿ ಅಭಿವೃದ್ಧಿ ನಿಗಮಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರಕ್ಕೆ ಕೇವಲ ಒಂದೊಂದು ಸೌಲಭ್ಯ ನಿಗದಿ ಮಾಡುವ ಮೂಲಕ ಮೀಸಲಿಟ್ಟ ಅನುದಾನವನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 20 ಗಂಗಾ ಕಲ್ಯಾಣ, 20 ನೇರ ಸಾಲ ಯೋಜನೆ ಸೌಲಭ್ಯ ಒದಗಿಸಬೇಕೆಂದು ರಾಜ್ಯ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ದಲಿತರ, ಬಡವರ ವಿರೋಧಿ ಧೋರಣೆ ಹೊಂದಿದ ಸರ್ಕಾರವಾಗಿದೆ. ಅತಿವೃಷ್ಠಿಯಿಂದ ರೈತರ ಬೆಳೆ ಹಾಳಾಗಿದ್ದರೂ ಸರ್ಕಾರ ಪರಿಹಾರ ನೀಡಿಲ್ಲ. ಬೆಳೆ ವಿಮೆ ನೀಡಿಲ್ಲ, ಅಲ್ಪಸ್ವಲ್ಪ ಬೆಳೆ ಬೆಳೆದ ರೈತರಿಗೆ ಕನಿಷ್ಠ ಬೆಂಬಲಬೆಲೆ ನಿಗದಿ ಮಾಡಿಲ್ಲ. ಮಳೆಗೆ ಬಿದ್ದ ಮನೆಗಳಿಗೆ ಪರಿಹಾರ ನೀಡಿಲ್ಲ, ಎಸ್‌ಸಿ ಎಸ್ಟಿ ನಿಗಮಗಳ 25 ಲಕ್ಷ ರೂ. ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ನೋಡಿದರೆ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದು ಗೊತ್ತಾಗುತ್ತದೆ ಎಂದರು.

ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮಗಳಿಗೆ ಜಿಲ್ಲಾ ಗುರಿ ನಿಗದಿ ಪಡಿಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10-20 ಸಾವಿರ ಎಸ್‌ಸಿ ಜನ ಇರುವ ಜನಸಂಖ್ಯೆ ವ್ಯಾಪ್ತಿಯಲ್ಲಿ ಕೇವಲ 1 ಗಂಗಾ ಕಲ್ಯಾಣ, 1ನೇರ ಸಾಲ, 1ಮಹಿಳಾ ಗುಂಪು ಹೀಗೆ ನಿಗದಿ ಮಾಡಿದೆ. ಜಿಲ್ಲೆಯ ಆರು ಜನ ಕಾಂಗ್ರೆಸ್ ಶಾಸಕರು ಸರ್ಕಾರಕ್ಕೆ ಒತ್ತಡ ಹಾಕಿ ಕನಿಷ್ಠ ತಲಾ 20 ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ, ಮಲ್ಲೇಶ ಕಡಕೋಳ, ಶಿವಾನಂದ ನಾಗಮ್ಮನವರ, ಕೃಷ್ಣಪ್ಪ ಕರ್ಜಗಿ ಇದ್ದರು.

100 ಕೋಟಿ ಅನುದಾನದ ದಾಖಲೆ ನೀಡಿ

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಉಪಚುನಾವಣೆ ವೇಳೆ ಕ್ಷೇತ್ರದ ಸಿಎಂ ಸಿದ್ದರಾಮಯ್ಯ ಕ್ಷೇತ್ರಕ್ಕೆ 100 ಕೋಟಿ ಅನುದಾನ ನೀಡಿದ್ದಾರೆ ಎಂದು ಜನರಿಗೆ ಹಸಿ ಸುಳ್ಳು ಹೇಳಿ ಮತ ಪಡೆದಿದ್ದಾರೆ. ಮೊದಲು ಅನುದಾನ ಬಿಡುಗಡೆಯಾದ ಬಗ್ಗೆ ದಾಖಲೆ ನೀಡಿ ಎಂದು ಡಿ.ಎಸ್.ಮಾಳಗಿ ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net