ಒಳ ಮೀಸಲಾತಿ ಜಾರಿಗೊಳಿಸದ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸುತ್ತಾರೆ; ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಎಚ್ಚರಿಕೆ

Published on

ಹಾವೇರಿ: ಸುಪ್ರೀಕೋರ್ಟ್ ಆದೇಶ ನೀಡಿದರೂ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾಗದ ಕಾಂಗ್ರೆಸ್ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ಆಯಾ ಕ್ಷೇತ್ರಗಳ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಎಡಗೈ ಸಮಾಜದ ಸಚಿವರು, ಮುಖಂಡರು ಭೇಟಿಯಾಗಿ ಹಲವು ಬಾರಿ ಮನವಿ ಮಾಡಿದರೂ ಸಿಎಂ ಸಿದ್ದರಾಮಯ್ಯ ಗಮನ ಹರಿಸುತ್ತಿಲ್ಲ. ಅಹಿಂದ ನಾಯಕ ಎಂದೆಲ್ಲ ಹೇಳಿಕೊಳ್ಳುವ ಸಿಎಂ ಒಳ ಮೀಸಲಾತಿ ಜಾರಿಗೊಳಿಸದೇ ಅಸ್ಪಶ್ಯರ ವಿರೋಧಿ ಎನಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಉಪಚುನಾವಣೆ ಘೋಷಣೆಯಾಗಿದೆ. ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರಕ್ಕೆ ಕೊನೆಯದಾಗಿ ಗಡವು ನೀಡುತ್ತೇವೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಸಮುದಾಯದ ಜನರೆಲ್ಲ ಒಂದಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಸಜ್ಜಾಗುವುದಾಗಿ ಎಚ್ಚರಿಕೆ ನೀಡಿದರು.
ಸಚಿವರು ರಾಜೀನಾಮೆ ನೀಡಲಿ :
ಸಮುದಾಯದ ಸಚಿವರಾದ ಕೆ.ಎಚ್.ಮುನಿಯಪ್ಪ ಹಾಗೂ ಆರ್.ಬಿ.ತಿಮ್ಮಾಪುರ ಒಳ ಮೀಸಲಾತಿ ಜಾರಿಗೊಳಿಸದಿರುವುದನ್ನು ಖಂಡಿಸಿ ಈ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಸಮುದಾಯದ ಪರವಾಗಿ ಹೋರಾಟ ನಡೆಸಲಿ ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಾಗರಾಜ ಮಾಳಗಿ, ಅಶೋಕ ಮರೆಣ್ಣನವರ, ರಾಜು ಮಾದರ, ಮಲ್ಲೇಶಪ್ಪ ಕಡಕೋಳ, ನಾಗರಾಜ ಬಣಕಾರ, ಸಂತೋಷ ಗುಡ್ಡಪ್ಪನವರ, ಎಂ.ಆಂಜನೇಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net