

ಹಾವೇರಿ: ಪ್ರಶಿಕ್ಷಣಾರ್ಥಿಗಳು ರಕ್ತದಾನಕ್ಕೆ ಸ್ವಯಂಪ್ರೇರಣೆಯಿಂದ ಮುಂದೆ ಬರಬೇಕು ಹಾಗೂ ಇತರರಿಗೂ ರಕ್ತದಾನದ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮನವಿ ಮಾಡಿದರು.
ನಗರದ ಟಿ.ಎಂ.ಎ.ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಕ್ತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸ್ತುತ ರಕ್ತದ ಕೊರತೆ ಇಲ್ಲ. ಈಗ ಜನರು ಜಾಗೃತರಾಗಿದ್ದಾರೆ ಜತೆಗೆ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ನೀಲೇಶ ಎಂ.ಎನ್. ರಕ್ತದಾನ ದಿನಾಚರಣೆಯ ಉದ್ದೇಶ ಹಾಗೂ ರಕ್ತದಾನದ ಮಹತ್ವದ ಕುರಿತು ವಿವರಿಸಿದರು. ರಕ್ತದಾನ ಕುರಿತು ವಿರಾಜ ಸುಣಗಾರ ಪ್ರತಿಜ್ಞಾವಿಧಿ ಬೋಧಿಸಿದರು.
ರಕ್ತದಾನಿಗಳಿಗೆ ಸನ್ಮಾನ :
ಸಮಾರಂಭದಲ್ಲಿ 29 ಬಾರಿ ರಕ್ತದಾನ ಮಾಡಿದ ಹಾನಗಲ್ಲ ತಾಲೂಕು ದುಮ್ಮಿನಹಾಳದ ಶಿವರಾಜ ಎಂ.ಎಚ್., 20 ಬಾರಿ ರಕ್ತದಾನ ಮಾಡಿದ ಶರಣಪ್ಪ ಕಲ್ಲಮ್ಮನವರ ಹಾಗೂ ಏಳು ಬಾರಿ ರಕ್ತದಾನ ಮಾಡಿದ ಜಿಲ್ಲಾಸ್ಪತ್ರೆ ಮನೋರೋಗ ತಜ್ಞೆ ಡಾ.ಲೀಲಾ ಅವರನ್ನು ಸನ್ಮಾನಿಸಲಾಯಿತು.
ಪ್ರಮಾಣಪತ್ರ ವಿತರಣೆ:
ರಾಷ್ಟ್ರೀಯ ರಕ್ತದಾನ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ಟಿ.ಎಂ.ಎ.ಇ ಬಿ.ಇಡಿ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಸೌಮ್ಯಾ ಕೆ, ಮಾರುತಿ ಮುದ್ದೇರ ಹಾಗೂ ಮಹೇಂದ್ರ ಅವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಪ್ರಾಚಾರ್ಯ ಬಸನಗೌಡ.ವಿ.ಎಂ, ಜಿಲ್ಲಾಏಡ್ಸ್ ನಿಯಂತ್ರಣ ಕೇಂದ್ರದ ಸಿಬ್ಬಂದಿ ಹಾಜರಿದ್ದರು. ಸುನೈನಾ ಸ್ವಾಗತಿಸಿದರು, ವಿರಾಜ ಸುಣಗಾರ ನಿರೂಪಿಸಿದರು. ಚೈತ್ರಾ ಎಸ್. ವಂದಿಸಿದರು.
ಜಾಗೃತಿ ಜಾಥಾ
ಕಾರ್ಯಕ್ರಮಕ್ಕೂ ಮುನ್ನ ಟಿ.ಎಂ.ಎ.ಇ. ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ರಕ್ತದಾನ ಕುರಿತು ಜಾಗೃತಿ ಜಾಥಾಕ್ಕೆ ಡಿಎಚ್‌ಒ ಡಾ.ರಾಜೇಶ ಸುರಗಿಹಳ್ಳಿ ಚಾಲನೆ ನೀಡಿದರು. ಇಜಾರಿಲಕಮಾಪುರದ ದುಂಡಿಬಸವೇಶ್ವರ ದೇವಸ್ಥಾನದವರೆಗೆ ಜಾಥಾ ಸಾಗಿತು.