

ಹಾವೇರಿ: ಜನರಲ್ಲಿ ಆತಂಕ ಉಂಟು ಮಾಡುವವರಿಗೆ ಆತಂಕವಾದಿಗಳು ಎನ್ನುತ್ತಾರೆ. ಕೇಂದ್ರದಲ್ಲಿ ಇರುವ ಸರ್ವಾಧಿಕಾರಿ, ಆತಂಕವಾದಿ ಸರ್ಕಾರವನ್ನು ಕೆಳಗೆ ಇಳಿಸಿ ಎಂದು ಚಿತ್ರನಟ ಪ್ರಕಾಶ್ ರೈ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಸಜ್ಜನರ ಫಂಕ್ಷನ್ ಹಾಲ್‌ನಲ್ಲಿ ಎಐಟಿಯುಸಿ ಸಂಘಟನೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಕರು ನೌಕರಿಗಾಗಿ, ಅಡುಗೆ ಸಿಬ್ಬಂದಿ ಜೀವನ ನಡೆಸುವುದಕ್ಕಾಗಿ ಹೀಗೆ ಹಲವು ಉದ್ಯೋಗ, ಅನ್ನಕ್ಕಾಗಿ ಕಾದು ಕೂತಿದ್ದಾರೆ. ಆದರೆ ಇದನ್ನು ಅರ್ಥೈಸಿಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಸರ್ಕರಗಳು ವಿಫಲವಾಗಿವೆ, ಇದಕ್ಕೆ ಎರಡೂ ಸರ್ಕಾರದವರು ಹೊಣೆಗಾರರು ಎಂದರು.
ನಾನು ಯಾವುದೇ ಪಕ್ಷದವನಲ್ಲ, ನಾನು ನಿಮ್ಮ ಪಕ್ಷದವನು. ಮಾಧ್ಯಮ ಮತ್ತು ನಾವು ಒಂದೇ ವಿರೋಧ ಪಕ್ಷದವರು. ಯಾವುದೇ ಸರ್ಕಾರ ಇದ್ದರು, ಬಂದರೂ ನಾವು ವಿರೋಧ ಪಕ್ಷದವರು. ಈಗ ಕೇಂದ್ರದಲ್ಲಿ ಆತಂಕವಾದಿಗಳ ಸರ್ಕಾರವಿದೆ. ಉದ್ಯೋಗದ ಗ್ಯಾರಂಟಿ ಇಲ್ಲ. ಕಳೆಪೆ ಮಟ್ಟದ ಆಹಾರ ನೀಡುತ್ತಿದೆ. ಎಲ್ಲಾ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನ ಬಳಸಿಕೊಳ್ಳಲಾಗುತ್ತಿದೆ. ಆಗಾಗ್ಗೆ ಬಿಟ್ಟಿ ಭಾಗ್ಯ ಕೊಡುವುದು, ಮುಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ನಾಯಕರು ರಾಜರಂತೆ ಓಡಾಡುತ್ತಿದ್ದಾರೆ. ಈಗಿನ ಮಹಾಪ್ರಭು ಕೈ ಮಾಡಿಕೊಂಡು ಓಡಾಡುತ್ತಿದ್ದಾರೆ. ಪುಷ್ಪಕ ವಿಮಾನದಲ್ಲಿ ಓಡಾಡುತ್ತಿದ್ದಾರೆ. ನಮ್ಮನ್ನು ಸ್ಪರ್ಶಿಸದ ವ್ಯಕ್ತಿ ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಿದ್ದಾರಾ..? ಈಗ ಧರ್ಮ, ಜಾತಿ, ಮಂದಿರ ಹಾಗೂ ಮಾಂಗಲ್ಯ ಬಗ್ಗೆ ಮಾತನಾಡುತ್ತಿದ್ದಾರೆ. ಉದ್ಯೋಗ ಸೃಷ್ಟಿ ಮಾಡುತ್ತೀದ್ದಾರಾ ಮಹಾಪ್ರಭುಗಳೇ ಎಂದೆನ್ನುವ ಮೂಲಕ ಹೆಸರೇಳದೇ ಚಾಟಿ ಬೀಸಿದರು.
ಬೆಂಬಲ ಬೆಲೆ ಕೇಳಿದರೆ, ರಸ್ತೆ ಅಗೆದು, ವಾಟರ್ ಗನ್ ಹೊಡೆದು ದೂರ ಸರಿಸುತ್ತಿದ್ದಾರೆ. ನಮ್ಮನ್ನು ತುಕಡೇ ಗ್ಯಾಂಗ್ ಅಂತಾರೆ. ಚುನಾವಣೆಯ ಚಾಣಕ್ಯ ಈ ಬಗ್ಗೆ ಮಾತನಾಡಲಿ. ಈ ಸರ್ವಧಾರಿಯನ್ನು, ಅವರ ಅಧಿಕಾರಿಯನ್ನ ಕೆಳಗಡೆ ಇಳಿಸಬೇಕು. ಕೋವಿಶಿಲ್ಡ್ ವಾಕ್ಸಿನ್‌ನಿಂದ ಎಷ್ಟೋ ಜನ ಸತ್ತು ಹೋಗಿದ್ದಾರೆ ಎಂದರು.
ಹಾಸನದಲ್ಲಿ ವಿಕೃತ ಕಾಮಿ ಇದ್ದಾನೆ. ಸುಮಾರು 2,800 ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಇದುವರೆಗೂ ಅವನ ಮೇಲೆ ಯಾವುದೇ ಕ್ರಮವಾಗಿಲ್ಲವೇಕೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಸಮಾರಂಭದಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಯಮ್ಮನವರ, ಪುಟ್ಟಸ್ವಾಮಿಗೌಡ್ರು, ರವೀಂದ್ರಗೌಡ ಪಾಟೀಲ, ಎಂ.ಎನ್.ನಾಯ್ಕ, ಬಸವರಾಜ ಹಾದಿಮನಿ, ಹನುಮಂತಪ್ಪ ಕಬ್ಬಾರ, ಎಂ.ಗೋಪಾಲ, ಮತ್ತಿತರರು ಇದ್ದರು.