

ಬೇಲೂರು: ಮೈಸೂರು ವಿಭಾಗ ಮಟ್ಟದ ಖೋ ಖೋ ಕ್ರೀಡಾಕೂಟದಲ್ಲಿ ಬೇಲೂರು ತಾಲೂಕಿನ ಹಲ್ಮಿಡಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೈಸೂರು ಜಿಲ್ಲೆಯ ತಿ.ನರಸೀಪುರದ ವಿದ್ಯೋದಯ ಶಾಲೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 14 ವರ್ಷ ವಯೋಮಿತಿಯ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲಿನ ಮೈಸೂರು ವಿಭಾಗ ಮಟ್ಟದ ಖೋ ಖೋ ಕ್ರೀಡಾಕೂಟದಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ(ಹನುಮಿಡಿ)ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡ ಉತ್ತಮ ಪ್ರದರ್ಶನದೊಂದಿಗೆ ಆಡಿದ ಎಲ್ಲ ಪಂದ್ಯಗಳಲ್ಲೂ ವಿಜೇತರಾಗಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಹಲ್ಮಿಡಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯಶಿಕ್ಷಕರು, ಸಹಶಿಕ್ಷಕರು, ಪಾಲಕರು ಹಳೇ ವಿದ್ಯಾರ್ಥಿಗಳು ಹಾಗೂ ಹಲ್ಮಿಡಿ ಗ್ರಾಮಸ್ಥರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಮುಖ್ಯಶಿಕ್ಷಕಿ ಗಿರಿಜಮ್ಮ, ದೈಹಿಕ ಶಿಕ್ಷಣ ಶಿಕ್ಷಕಿ ದಾಕ್ಷಾಯಿಣಿ, ಸಹ ಶಿಕ್ಷಕ ಸೋಮೇಶ್‌ಗೌಡ, ವ್ಯವಸ್ಥಾಪಕ ಎನ್.ಈ.ಜಗದೀಶ್, ತರಬೇತುದಾರರಾದ ಅಕ್ಷಯ್.ಎಚ್.ಎಂ ಮತ್ತು ಚೇತನ್.ಎಚ್.ಎನ್, ಆಟಗಾರ ವಿದ್ಯಾರ್ಥಿಗಳಾದ ತೇಜಸ್, ರೋಹಿತ್, ಯಶವಂತ ಆಕಾಶ್, ದರ್ಶನ್, ತರುಣ್, ದ್ರುವ, ತರುಣ್.ಆರ್, ಆದಿತ್ಯ, ಸಂಪತ್‌ಗೌಡ, ಭುವನ್, ಪುನೀತ್ ಇತರರಿದ್ದರು.