

ಆಲೂರು: ರಕ್ತದಾನ ಶ್ರೇಷ್ಠವಾಗಿದ್ದು, ಇದರಲ್ಲಿ ಯುವ ಜನರ ಪಾತ್ರ ಮುಖ್ಯವಾಗಿದೆ. ನಾವು ಮಾಡುವ ರಕ್ತದಾನದಿಂದ ಅದೆಷ್ಟೋ ಜೀವಗಳನ್ನು ಉಳಿಸಬಹುದಾಗಿದೆ ಎಂದು ಆಲೂರು ತಾಲೂಕು ರೆಡ್‌ಕ್ರಾಸ್ ಸಭಾಪತಿ ಕೆ.ಎನ್.ಕಾಂತರಾಜು ತಿಳಿಸಿದರು.
ಆಲೂರು ತಾಲೂಕು ರೆಡ್‌ಕ್ರಾಸ್ ಘಟಕ, ರಾಯರ ಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ವಿಭಾಗದ ಸಹಯೋಗದಲ್ಲಿ ರಾಯರಕೊಪ್ಪಲು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ರಕ್ತದ ಅಗತ್ಯ ಹೆಚ್ಚಿದ್ದು, ದಾನಿಗಳ ಅಗತ್ಯವೂ ಹೆಚ್ಚಿದೆ. ಆದ್ದರಿಂದ ರಕ್ತದಾನದಲ್ಲಿ ಯುವ ಜನತೆ ಮುಖ್ಯ ಪಾತ್ರ ನಿಭಾಯಿಸಬೇಕು. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆದ್ದರಿಂದ ಯುವ ಜನತೆ ಉತ್ತಮ ಆಹಾರ ಸೇವನೆ, ಉತ್ತಮ ಹವ್ಯಾಸಗಳನ್ನು ಹೊಂದಿರಬೇಕು ಎಂದು ತಿಳಿಸಿದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಾಗರ್ ಮಾತನಾಡಿ, ಒಬ್ಬ ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ 5 ಬಾರಿ ರಕ್ತದಾನ ಮಾಡಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಅಂಜಿಕೆ ಭಯವಿಲ್ಲದೆ ನಿರಾತಂಕವಾಗಿ ರಕ್ತದಾನ ಮಾಡಬಹುದು ನೀಡಿದರು.
ಸಾರ್ವಜನಿಕರಿಂದ 18 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ರೆಡ್‌ಕಾಸ್ ಕಾರ್ಯದರ್ಶಿ ವೀರಭದ್ರಸ್ವಾಮಿ, ಪದಾಧಿಕಾರಿಗಳಾದ ಶಶಿಧರ್ ಬೆಕ್ಕಡಿ, ರಘು, ಧರ್ಮಣ್ಣ, ವೈದ್ಯಕೀಯ ಸಿಬ್ಬಂದಿ ಡಾ.ನಾಗಲಕ್ಷ್ಮೀ, ಲೀಲಾವತಿ, ಭಾನುಮತಿ, ಹನುಮಂತ ಶುಶ್ರೂಷಕಿಯರಾದ ನೀಲಾಂಬಿಕೆ, ಶಿಲ್ಪಾ, ನಾಜಿಮಾ ಇತರರಿದ್ದರು.