ವಸತಿ ಸೌಲಭ್ಯಕ್ಕೆ ಅಗತ್ಯ ಕ್ರಮ

ಬೇಲೂರು ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಭರವಸೆ
ಬೇಲೂರು ಪಟ್ಟಣದ ಪುರಸಭೆ ಮುಂಭಾಗ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಗಣ್ಯರು.
ಬೇಲೂರು ಪಟ್ಟಣದ ಪುರಸಭೆ ಮುಂಭಾಗ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಗಣ್ಯರು.
Published on

ಬೇಲೂರು : ಜೀವದ ಹಂಗು ತೊರೆದು ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳ ಕುರಿತು ಪಟ್ಟಿ ಸಿದ್ಧಪಡಿಸಿ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ಆದ್ಯತೆ ಮೇರೆಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಹೇಳಿದರು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಪುರಸಭೆ ಮುಂಭಾಗ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಪುರಸಭೆ ಸಾಮಾನ್ಯ ಸಭೆಯನ್ನೇ ಕಾಯಬೇಕೆಂದಿಲ್ಲ. ತುರ್ತು, ಅಗತ್ಯವಿದ್ದರೆ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಚರ್ಚಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಪೌರ ಕಾರ್ಮಿಕರು ಒಂದೇ ಮನೆಯಲ್ಲಿ ನಾಲ್ಕೈದು ಕುಟುಂಬ ವಾಸಿಸುತ್ತಿವೆ. ವಸತಿ ಸಮಸ್ಯೆ ಅವರ ಬದುಕಿನ ಪ್ರಮುಖ ಸಮಸ್ಯೆಯಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಪೌರ ಕಾರ್ಮಿಕರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ವಸತಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಪುರಸಭೆಯಿಂದ ಕ್ರಮ ವಹಿಸಲಾಗುವುದು. ಜತೆಗೆ ಸಾರ್ವಜನಿಕರೂ ಅವರನ್ನು ಗೌರವದಿಂದ ಕಾಣಬೇಕು ಎಂದರು.

ಪುರಸಭೆ ಸದಸ್ಯ ಬಿ.ಗಿರೀಶ್ ಮಾತನಾಡಿ, ಪೌರಕಾರ್ಮಿಕರಿಗೆ ಕೇವಲ ದಿನಾಚರಣೆಯಂದು ಸನ್ಮಾನ ಮಾಡಿ ಗೌರವಿಸಿದರೆ ಸಾಲದು. ಅವರ ಜೀವನಮಟ್ಟ ಸುಧಾರಿಸುವಂತ ಶಾಶ್ವತ ಕಾರ್ಯಕ್ರಮ ರೂಪಿಸಬೇಕು. ಸಾಮಾನ್ಯ ಸಭೆಗಳಲ್ಲಿ ಪೌರಕಾರ್ಮಿಕರ ಸಮಸ್ಯೆ ಕುರಿತು ಚರ್ಚೆ ನಡೆಯುತ್ತಿದ್ದು, ಮುಂದಿನ ಹಂತದಲ್ಲಿ ಅವುಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು. ಪುರಸಭೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಗೋಮಾಳ ಸೇರಿದಂತೆ ಖಾಲಿ ಜಾಗಗಳನ್ನು ಗುರುತಿಸಿ ನಿವೇಶನ ನೀಡುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಕಾಯಂ ಕಾರ್ಮಿಕರ ಜತೆಗೆ ಗುತ್ತಿಗೆ ನೌಕರರು, ಆಟೋ ಟಿಪ್ಪರ್ ಸಿಬ್ಬಂದಿ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಇತರ ಸಿಬ್ಬಂದಿ ಸಮಸ್ಯೆ ಪರಿಗಣಿಸಬೇಕು.

ಪೌರ ಕಾರ್ಮಿಕರು ಮತ್ತು ಕುಟುಂಬದವರಿಗೆ ಟೈಲರಿಂಗ್ ಯಂತ್ರ, ಟ್ಯಾಬ್, ವೈಯಕ್ತಿಕ ಶೌಚಗೃಹ, ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಕ್ರಿಯಾಯೋಜನೆ ರೂಪಿಸಿ ಸಾಧ್ಯವಾದಷ್ಟು ಬೇಗ ಅನುಷ್ಠಾನಗೊಳಿಸಬೇಕು. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಲಭ್ಯವಾಗುವ ಅನುದಾನವನ್ನು ಅವರು ವಾಸಿಸುವ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸುವುದರೊಂದಿಗೆ ಸಾಧ್ಯವಾದಷ್ಟು ಮಟ್ಟಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕು ಎಂದರು.

ಪುರಸಭೆ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಪೌರಕಾರ್ಮಿಕರ ಸುರಕ್ಷತೆ, ಆರೋಗ್ಯದ ದೃಷ್ಟಿಯಿಂದ ಮಲಗುಂಡಿ ಮತ್ತು ಶೌಚಗುಂಡಿಗಳ ಸ್ವಚ್ಛತಾ ಕಾರ್ಯಕ್ಕೆ ಆಧುನಿಕ ತಂತ್ರಜ್ಞಾನ ಬಳಸಬೇಕು. ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಮಲಗುಂಡಿಯೊಳಗೆ ಇಳಿಸಿ ಕೆಲಸ ಮಾಡಿಸಬಾರದು. ಪೌರ ಕಾರ್ಮಿಕ ದಂಪತಿ ಇಬ್ಬರೂ ಕೆಲಸಕ್ಕೆ ತೆರಳಿದ ಸಂದರ್ಭ ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಗೆ ವ್ಯವಸ್ಥೆ ಕಲ್ಪಿಸಬೇಕು. ಪೌರ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಸೌಲಭ್ಯ ದೊರೆಯುವಂತಾಗಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಜಮಾಲೂದ್ದೀನ್ ಮಾತನಾಡಿ, ಪೌರ ಕಾರ್ಮಿಕರು ದೇಶದ ಸೈನಿಕರಿದ್ದಂತೆ. ನಗರದ ಸ್ವಚ್ಛತೆ ಕಾಪಾಡುವುದರ ಜತೆಗೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ನಿರ್ವಹಿಸುತ್ತಿರುವ ಸೇವೆ ಮಹತ್ವದ್ದಾಗಿದೆ. ವೈದ್ಯರು ಜನರ ಆರೋಗ್ಯವನ್ನು ಕಾಪಾಡುವಂತೆ, ಪೌರ ಕಾರ್ಮಿಕರು ಸ್ವಚ್ಛತೆ ಮೂಲಕ ಕಾಯಿಲೆಗಳು ಹರಡದಂತೆ ತಡೆಯುತ್ತಾರೆ. ಬೆಳಗ್ಗೆಯೇ ಎದ್ದು ನಗರದ ಸ್ವಚ್ಛತೆಗಾಗಿ ದುಡಿಯುವ ಅವರ ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯುವಂತೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಉಧ್ಯಕ್ಷೆ ಉಷಾ ಸತೀಶ್ ಸದಸ್ಯರಾದ ಪ್ರಭಾಕರ್, ಜಗದೀಶ್, ಶ್ರೀನಿವಾಸ್, ಅಶೋಕ್, ಮೀನಾಕ್ಷಿ, ಸೌಮ್ಯಾ, ಸುಧಾರಾಣಿ, ಆರೋಗ್ಯಾಧಿಕಾರಿ ಜ್ಯೋತಿ ಸೇರಿದಂತೆ ಪೌರ ಕಾರ್ಮಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net