ಮ್ಯಾನ್‌ಹೋಲ್‌ಗೆ ಬಿದ್ದು ಯುವಕ ಸಾವು

ಮೇಕೆಯನ್ನು ರಕ್ಷಿಸಲು ಹೋಗಿ ದುರಂತ
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ವರವಲಯದ ಖಾಸಗಿ ಲೇಔಟ್‌ನಲ್ಲಿ ಮೇಕೆ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವ ರೈತ ಗಿರೀಶ್.
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ವರವಲಯದ ಖಾಸಗಿ ಲೇಔಟ್‌ನಲ್ಲಿ ಮೇಕೆ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವ ರೈತ ಗಿರೀಶ್. Youth dies after falling into manhole
Published on: 

ಹಾಸನ: ಹೊಳೆನರಸೀಪುರ ತಾಲೂಕಿನ ಮಲ್ಲಪ್ಪಹಳ್ಳಿ ಗ್ರಾಮದ ಸಮೀಪದ ಖಾಸಗಿ ಲೇಔಟ್‌ನಲ್ಲಿ ಗುರುವಾರ ಸಂಜೆ ಮ್ಯಾನ್‌ಹೋಲ್‌ಗೆ ಬಿದ್ದ ಮೇಕೆಯನ್ನು ರಕ್ಷಿಸಲು ಹೋದ ಯುವಕನೂ ಅದೇ ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟಿದ್ದಾರೆ.

ಪಟ್ಟಣದ ಹೊರವಲಯದಲ್ಲಿರುವ ಶ್ರೀಎಣ್ಣೆ ಹೊಳೆ ರಂಗನಾಥಸ್ವಾಮಿ ಲೇಔಟ್‌ನಲ್ಲಿ ಈ ದುರಂತ ಸಂಭವಿಸಿದ್ದು, ಗಿರೀಶ್ (30) ಮೃತಪಟ್ಟ ದುರ್ದೈವಿ.

ಶ್ರೀಎಣ್ಣೆ ಹೊಳೆ ರಂಗನಾಥಸ್ವಾಮಿ ಲೇಔಟ್‌ನೊಳಗೆ ಸುಮಾರು 30 ಅಡಿ ಆಳದ ಮ್ಯಾನ್‌ಹೋಲ್ ಇದ್ದು, ಅದನ್ನು ಸಮರ್ಪಕವಾಗಿ ಮುಚ್ಚದೆ ತೆರೆದ ಸ್ಥಿತಿಯಲ್ಲಿಯೇ ಬಿಡಲಾಗಿತ್ತು. ಗಿರೀಶ್ ಅವರು ನ.19ರಂದು (ಗುರುವಾರ) ಸಂಜೆ ಮೇಕೆಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಒಂದು ಮೇಕೆ ಆಕಸ್ಮಿಕವಾಗಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಿದೆ. ಇದನ್ನು ಗಮನಿಸಿದ ಗಿರೀಶ್, ಮೇಕೆಯನ್ನು ಹೇಗಾದರೂ ಮಾಡಿ ಮೇಲೆತ್ತಿ ರಕ್ಷಿಸಬೇಕೆಂಬ ಉದ್ದೇಶದಿಂದ ಮ್ಯಾನ್‌ಹೋಲ್ ಒಳಗೆ ಇಳಿಯಲು ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ಅವರೂ ಆಯತಪ್ಪಿ ಮ್ಯಾನ್‌ಹೋಲ್‌ಗೆ ಬಿದ್ದ ಪರಿಣಾಮವಾಗಿ ಕೊಳಚೆ ನೀರು ತುಂಬಿ ಹರಿಯುತ್ತಿದ್ದ ಆಳವಾದ ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಹೊರತೆಗೆಯಲು ಕಾರ್ಯಾಚರಣೆ ಆರಂಭಿಸಿದರು. ಮ್ಯಾನ್‌ಹೋಲ್‌ನಲ್ಲಿ ಭಾರಿ ಪ್ರಮಾಣದ ಕೊಳಚೆ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ತೊಂದರೆಯಾಯಿತು. ಅಂತಿಮವಾಗಿ ಗುರುವಾರ ತಡರಾತ್ರಿ ಮೃತದೇಹವನ್ನು ಮೇಲೆತ್ತಿದರು. ಶುಕ್ರವಾರ ಮರಣೋತ್ತರ ಪರೀಕ್ಷೆ ನಂತರ ಅವರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯಿತು. ನಂತರ ಅಂತ್ಯಕ್ರಿಯೆ ನಡೆಯಿತು.

ಇತ್ತ ಯುವಕನ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದು, ಮ್ಯಾನ್‌ಹೋಲ್‌ನ್ನು ಮುಚ್ಚದೆ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿರುವ ಲೇಔಟ್ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಸುರಕ್ಷತಾ ಕ್ರಮ ಕೈಗೊಂಡಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು ಎಂದು ಕುಟುಂಬಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.