ಮರಕ್ಕೆ ಬೈಕ್ ಡಿಕ್ಕಿಯಾಗಿ ಯುವಕ ಸಾವು

ಓಡೋಡಿ ಬಂದ ಆಶಾ ಕಾರ್ಯಕರ್ತೆ
ಸುಜಯ್
ಸುಜಯ್
Published on: 

ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಲಕ್ಷ್ಮೀಪುರ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾನೆ.

ಆಲೂರು ತಾಲೂಕಿನ ಕಾರ್ಜುವಳ್ಳಿ ಗ್ರಾಮದ ಸುಜಯ್ (21) ಮೃತ. ಮಂಗಳವಾರ ರಾತ್ರಿ ಆಲೂರಿನಿಂದ ಸ್ವಗ್ರಾಮ ಕಾರ್ಜುವಳ್ಳಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ವಾಹನದ ಹೆಡ್‌ಲೈಟ್ ಬೆಳಕಿನಿಂದ ರಸ್ತೆ ಕಾಣದೆ ನಿಯಂತ್ರಣ ತಪ್ಪಿದ ಬೈಕ್ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುಜಯ್ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಓಡೋಡಿ ಬಂದ ಆಶಾ ಕಾರ್ಯಕರ್ತೆ: ಮೃತ ಸುಜಯ್ ಆಶಾ ಕಾರ್ಯಕರ್ತೆ ರೂಪಾ ಅವರ ಪುತ್ರ. ಕಳೆದ ಒಂಬತ್ತು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅವರು ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ಆಲೂರಿಗೆ ಧಾವಿಸಿದ್ದಾರೆ. ಆಸ್ಪತ್ರೆಯಲ್ಲಿ ಮಗನ ಮೃತದೇಹ ಕಂಡಾಗ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮಗನ ಮೃತದೇಹವನ್ನು ತಾಯಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.