ಬೇಸಿಗೆಯಲ್ಲಿ ಜಾನುವಾರು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ

ರೈತರಿಗೆ ಶಾಸಕ ಎ.ಮಂಜು ಸಲಹೆ
ಹೈನು ರಾಸುಗಳ ನಿರ್ವಹಣೆ
ಗೊರೂರು ಸಮೀಪದ ಪದುಮನಹಳ್ಳಿಯಲ್ಲಿ ಬರ ಹಾಗೂ ಬೇಸಿಗೆಯಲ್ಲಿ ಹೈನುರಾಸುಗಳ ನಿರ್ವಹಣೆ ಕುರಿತು ಏರ್ಪಡಿಸಿದ್ದ ತಾಲೂಕು ಮಟ್ಟದ ಕಾರ್ಯಾಗಾರವನ್ನು ಶಾಸಕ ಎ.ಮಂಜು ಉದ್ಘಾಟಿಸಿದರು. ಡಾ.ಬಿ.ಕೆ.ರಮೇಶ್, ಡಾ.ಸುಂದರೇಶ್, ಡಾ.ಚೇತನ್ ಡಾ.ಪವನ್, ಉಮೇಶ್ ಇತರರಿದ್ದರು.
Published on: 

ಅರಕಲಗೂಡು: ಬರ ಹಾಗೂ ಬೇಸಿಗೆ ಸಂದರ್ಭದಲ್ಲಿ ರಾಸುಗಳ ಆರೋಗ್ಯ ಕಾಪಾಡಿಕೊಳ್ಳಲು ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಶಾಸಕ ಎ.ಮಂಜು ಸಲಹೆ ನೀಡಿದರು.

ಗೊರೂರು ಸಮೀಪದ ಪದುಮನಹಳ್ಳಿಯ ಖಾಸಗಿ ಸಭಾಂಗಣದಲ್ಲಿ ತಾಲೂಕು ಕಾಮಧೇನು ಪಶು ವೈದ್ಯಕೀಯ ಸಂಘ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಸಹಯೋಗದಲ್ಲಿ ಬರ ಹಾಗೂ ಬೇಸಿಗೆಯಲ್ಲಿ ಹೈನು ರಾಸುಗಳ ನಿರ್ವಹಣೆ ಕುರಿತು ಭಾನುವಾರ ಆಯೋಜಿಸಿದ್ದ ತಾಲೂಕುಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.

ಈ ಹಿಂದೆ ನಾನು ಪಶುಪಾಲನಾ ಇಲಾಖೆ ಸಚಿವನಾಗಿದ್ದಾಗ 650 ಪಶುವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಇಲಾಖೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡು ಪಶುಪಾಲಕರಿಗೆ ಉತ್ತಮ ಸೇವೆ ಒದಗಿಸಲು ಕ್ರಮವಹಿಸಲಾಗಿತ್ತು. ಹೈನುಗಾರಿಕೆ ನಡೆಸುತ್ತಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಹಾಲಿಗೆ 5 ರೂ. ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ಇದರಿಂದ ಹೈನುಗಾರಿಕೆ ರೈತರಿಗೆ ಆರ್ಥಿಕವಾಗಿ ನೆರವಾಗಿತ್ತು ಎಂದರು.

ಬರ ಹಾಗೂ ಬೇಸಿಗೆ ಸಂದರ್ಭದಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು, ಪೌಷ್ಟಿಕ ಆಹಾರ ಹಾಗೂ ನೆರಳು ಒದಗಿಸುವುದು ಸೇರಿದಂತೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪಶುಪಾಲನಾ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜಾನುವಾರುಗಳ ಆರೋಗ್ಯ ರಕ್ಷಣೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ತಾಲೂಕು ಕಾಮಧೇನು ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಚೇತನ್ ಮಾತನಾಡಿ, ತಾಲೂಕಿನಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಮೇವು ಕೊರತೆ ಉಂಟಾಗುವ ಸಾಧ್ಯತೆ ಇದೆ. ಮೇವು ಕೊರತೆ ನೀಗಿಸಲು ರೈತರು ಮರದ ತೊಗಟೆ, ಮರಗಳಲ್ಲಿನ ಹಸಿರು ಸೊಪ್ಪನ್ನು ನಿಗದಿತ ಪ್ರಮಾಣದಲ್ಲಿ ಕತ್ತರಿಸಿ ಮೇವಾಗಿ ಬಳಸಬಹುದು. ಪಶುವೈದ್ಯರ ಸಲಹೆ ಪಡೆದು ಸೂಕ್ತ ಸೊಪ್ಪನ್ನು ಮಾತ್ರ ನಿರ್ದಿಷ್ಟ ಪ್ರಮಾಣದಲ್ಲಿ ಮೇವಾಗಿ ಬಳಸಬೇಕು ಎಂದು ತಿಳಿಸಿದರು.

ಪಶುಪಾಲನಾ ಇಲಾಖೆ ಜಿಲ್ಲಾ ನಿರ್ದೇಶಕ ಡಾ.ಬಿ.ಕೆ.ರಮೇಶ್, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುಂದರೇಶ್, ಪಶು ವೈದ್ಯಾಧಿಕಾರಿ ಡಾ.ಪವನ್, ದಿಲೀಪ್, ಉಮೇಶ್, ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net